ಮುಂಬಯಿ : ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಶೇರು ಮಾರುಕಟ್ಟೆಯ ಭರ್ಜರಿ ಏರಿಕೆಗೆ ಕಾರಣವಾಗಿದೆ. ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 616 ಅಂಕಗಳ ಭಾರೀ ಏರಿಕೆಯನ್ನು ಸಾಧಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,123 ಅಂಕಗಳ ದಾಖಲೆಯ ಎತ್ತರವನ್ನು ತಲುಪಿತು.
ಇವೆಲ್ಲಕ್ಕಿಂತ ಮುಖ್ಯವಾಗಿ ಕೈಗಾರಿಕಾ ಉತ್ಪಾದನಾ ಅಂಕಿ ಅಂಶಗಳು ನಿರೀಕ್ಷೆಗಿಂತ ಉತ್ತಮ ಮಟ್ಟದಲ್ಲಿ ದಾಖಲಾಗಿರುವುದು ಕೂಡ ಸೆನ್ಸೆಕ್ಸ್, ನಿಫ್ಟಿಗೆ ಇನ್ನಷ್ಟು ಉತ್ತೇಜನ ನೀಡಿದವು. ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಕಳೆದ ಜನವರಿಯಲ್ಲಿ ವಾರ್ಷಿಕ ನೆಲೆಯಲ್ಲಿ ಶೇ.2.7ರಷ್ಟು ಏರಿರುವುದು ಶೇರು ಮಾರುಕಟ್ಟೆಯಲ್ಲಿ ಹೊಸ ಉತ್ತೇಜನವನ್ನು ತುಂಬಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಕ್ಯಾಪಿಟಲ್ ಗೂಡ್ಸ್ ಮತ್ತು ರಿಯಲ್ಟಿ ರಂಗದ ಶೇರುಗಳು ಶೇ.2.20ರ ಏರಿಕೆಯನ್ನು ದಾಖಲಿಸಿದವು. ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 188.20 ಅಂಕಗಳ ಏರಿಕೆಯನುನ ಸಾಧಿಸಿ ಸಾರ್ವಕಾಲಿಕ ಎತ್ತರವಾಗಿ 9,1222.75 ಅಂಕಗಳ ಮಟ್ಟವನ್ನು ವಹಿವಾಟಿನ ನಡುವಿನಲ್ಲಿ ತಲುಪಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 436.28 ಅಂಕಗಳ ಏರಿಕೆಯೊಂದಿಗೆ 29,436.28 ಅಂಕಗಳ ಮಟ್ಟದಲ್ಲೂ, ನಿಫ್ಟಿ 151.05 ಅಂಕಗಳ ಏರಿಕೆಯೊಂದಿಗೆ 9,856.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.