ಮುಂಬಯಿ : ಡಿಸೆಂಬರ್ ತ್ತೈಮಾಸಿಕ ಅಂತ್ಯಕ್ಕೆ ದೇಶದ ಜಿಡಿಪಿ ಅಂಕಿ ಅಂಶಗಳು ಧನಾತ್ಮಕವಾಗಿರುವುದು ಹಾಗೂ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಅನುಕೂಲಕರ ಪ್ರವೃತ್ತಿ ನೆಲೆಗೊಂಡಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಕಳೆದೆರಡು ದಿನಗಳ ನಿರಂತರ ನಷ್ಟಕ್ಕೆ ಕೊನೆಹಾಡಿ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 230 ಅಂಕಗಳ ಅಮೋಘ ರಾಲಿಯನ್ನು ದಾಖಲಿಸಿದೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 218.28 ಅಂಕಗಳ ಏರಿಕೆಯೊಂದಿಗೆ 28,961.60 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 56.10 ಅಂಕಗಳ ಏರಿಕೆಯೊಂದಿಗೆ 8,935.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇರುಪೇಟೆಗೆ ಹೊಸ ಹುಮ್ಮಸ್ಸು ನೀಡಿದ್ದು ಬ್ಯಾಂಕ್ ಶೇರುಗಳು . ಬ್ಯಾಂಕ್ ನಿಫ್ಟಿ ಶೇ.1ರ ಏರಿಕೆಯನ್ನು ಕಾಣುವುದರೊಂದಿಗೆ ಎಕ್ಸಿಸ್ ಬ್ಯಾಂಕ್ ಶೇ.3ರಷ್ಟು ಏರಿತು. ಆಮ್‌ಟೆಕ್ ಆಟೋ ಶೇ.5ರಷ್ಟು ಏರಿತು.
ಚೀನದ ಕೈಗಾರಿಕಾ ಚಟುವಟಿಕೆಗಳು ನಿರೀಕ್ಷೆಗಿಂತ ಉತ್ತಮ ನಿರ್ವಹಣೆಯನ್ನು ತೋರಿರುವ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಇಂದು ಇತರ ಏಶ್ಯನ್ ಶೇರು ಮಾರುಕಟ್ಟೆಗಳು ಮುನ್ನಡೆಯನ್ನು ಕಂಡವು.
ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.08 ರಷ್ಟು ಏರಿತು. ಜಪಾನಿನ ನಿಕ್ಕಿ ಶೇ.0.54 ಹಾಗೂ ಶಾಂಘೈನ ಕಾಂಪೋಸಿಟ್ ಇಂಡೆಕ್ಸ್ ಶೇ.0.40 ಏರಿಕೆಯನ್ನು ದಾಖಲಿಸಿದವು.