ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಸ್ಥಿರತೆಯ ಪ್ರವೃತ್ತಿಯನ್ನು ಅನುಸರಿಸಿ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರು ವ್ಯಾಪಕ ಖರೀದಿಗೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 157.97 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ 29,778.47 ಅಂಕಗಳ ಮಟ್ಟವನ್ನು ತಲುಪಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕವು 46.90 ಅಂಕಗಳ ಏರಿಕೆಯನ್ನು ಸಾಧಿಸಿ 9,220.65 ಅಂಕಗಳ ದಾಖಲೆಯ ಎತ್ತರವನ್ನು ತಲುಪಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 155.79 ಅಂಕಗಳ ಏರಿಕೆಯೊಂದಿಗೆ 29,776.29 ಅಂಕಗಳ ಮಟ್ಟದಲ್ಲೂ ನಿಫ್ಟಿ 30.10 ಅಂಕಗಳ ಏರಿಕೆಯೊಂದಿಗೆ 9,203.85 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟನಲ್ಲಿ ರಿಲಯನ್ಸ್ ಶೇ.4.33, ಗೇಲ್ ಶೇ.1.63, ಲಾರ್ಸನ್ ಶೇ.1.10, ಟಾಟಾ ಮೋಟರ್ ಶೇ.0.70 ಮತ್ತು ಮಹೀಂದ್ರ ಶೇರು ಧಾರಣೆ ಶೇ.0.57ರ ಏರಿಕೆಯನ್ನು ದಾಖಲಿಸಿತು.
ಈಗಿನ್ನು ಬಿಡುಗಡೆಗೊಳ್ಳುವ ಅಮೆರಿಕ ಉದ್ಯೋಗ ಅಂಕಿ ಅಂಶಗಳು ಹಾಗೂ ಈ ವಾರದಲ್ಲಿ ನಡೆಯಲಿರುವ ಅಮೆರಕ ಮತ್ತು ಚೀನೀ ಅಧ್ಯಕ್ಷರ ಭೇಟಿಯು ಹೂಡಿಕೆದಾರರ ಕುತೂಹಲವನ್ನು ಕೆರಳಿಸಿದೆ.
ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.44, ಜಪಾನಿನ ನಿಕ್ಕಿ ಶೇ.0.36ರಷ್ಟು ಇಂದಿನ ಆರಂಭಿಕ ವಹಿವಾಟನಲ್ಲಿ ಏರಿರುವುದು ಗಮನಾರ್ಹವಾಗಿದೆ. ಶಾಂಘೈ ಶೇರು ಪೇಟೆಗೆ ಇಂದು ರಜೆ. ಕಳೆದ ಶುಕ್ರವಾರ ಅಮೆರಿಕದ ಡೋವ್‌ಜೋನ್ಸ್ ಸೂಚ್ಯಂಕ ಶೇ.0.31ರಷ್ಟು ಕುಸಿದಿತ್ತು.