ಮುಂಬಯಿ : ಹೂಡಿಕೆದಾರರರು ಹಾಗೂ ವಹಿವಾಟುದಾರರು ಕಳೆದ ಕೆಲವು ದಿನಗಳ ಶೇರು ಏರಿಕೆ ಲಾಭವನ್ನು ನಗದೀಕರಿಸಲು ಮುಂದಾದ ಪ್ರಯುಕ್ತ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಆರಂಭಿಕ ವಹಿವಾಟನಲ್ಲಿ 88 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 10.55ರ ಹೊತ್ತಿಗೆ ಕೊಂಚ ಚೇತರಿಕೆಯನ್ನು ಕಂಡ ಸೆನ್ಸೆಕ್ಸ್ 53.24 ಅಂಕಗಳ ನಷ್ಟದೊಂದಿಗೆ 28,786.55 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.25 ಅಂಕಗಳ ನಷ್ಟದೊಂದಿಗೆ 8,876.50 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಶೇರು ಮಾರುಕಟ್ಟೆ ಈಗಿನ್ನು ಸದ್ಯದಲ್ಲೇ ಬಹಿರಂಗಗೊಳ್ಳುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದತ್ತ ಮುಖಮಾಡಿದ್ದು ಎಚ್ಚರಿಕೆಯ ನಡೆಯನ್ನು ತೋರುವಂತೆ ಕಾಣುತ್ತಿದೆ.
ಇಂದಿನ ವಹಿವಾಟಿನಲ್ಲಿ ರಿಲಯನ್ಸ್ ಶೇರು ಶೇ.4ರ ಏರಿಕೆಯನ್ನು ದಾಖಲಿಸಿತು. ರಿಲಯನ್ಸ್ ಶೇರು ಧಾರಣೆ ಗುರಿಯನ್ನು ಸಿಎಲ್‌ಎಸ್‌ಎ ಮೇಲ್ಮಟ್ಟಕ್ಕೆ ಏರಿಸಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಎಚ್ ಡಿ ಎಫ್ ಸಿ ಮತ್ತು ಐಟಿಸಿ ಇಂದಿನ ಆರಂಭಿಕ ವಹಿವಾಟಿನಲ್ಲಿ ತೀವ್ರ ಒತ್ತಡಕ್ಕೆ ಗುರಿಯಾದವು.
ಇಂದು ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.49, ಜಪಾನಿನ ನಿಕ್ಕಿ ಶೇ.0.14 ಹಾಗೂ ಶಾಂಘೈ ಸೂಚ್ಯಂಕ ಶೇ.0.32ರ ನಷ್ಟಕ್ಕೆ ಗುರಿಯಾದವು. ಅಮೆರಿಕದ ಡೋವ್ ಜೋನ್ಸ್ ಕೂಡ ನಿನ್ನೆ ಶೇ.0.53ರ ನಷ್ಟಕ್ಕೆ ಗುರಿಯಾಗಿತ್ತು.