ಮುಂಬಯಿ : ಆಟೋ, ಹೆಲ್ತ್ ಕೇರ್, ಪವರ್, ರಿಯಲ್ಟಿ, ಕನ್ಸೂಮರ್ ಡ್ಯುರೇಬಲ್ ಮುಂತಾಗಿ ಹತ್ತಾರು ರಂಗದ ಕಂಪೆನಿಗಳ ತ್ತೈಮಾಸಿಕ ಫಲಿತಾಂಶ ಕಳಪೆಯಾಗಿರುವ ಕಾರಣಕ್ಕೆ ಭ್ರಮನಿರಸನಗೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 183.75 ಅಂಕಗಳ ನಷ್ಟದೊಂದಿಗೆ 28,155.56 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 67.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,724.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಟಾಟಾ ಮೋಟರ್ ಶೇರು ಇಂದಿನ ವಹಿವಾಟಿನಲ್ಲಿ ಶೇ.10ರಷ್ಟು ಕುಸಿದು ಅಚ್ಚರಿ ಮೂಡಿಸಿತು. ಮುಂದಿನ ಮೂರರಿಂದ ನಾಲ್ಕು ತ್ತೈಮಾಸಿಕಗಳ ವರೆಗೂ ಟಾಟಾ ಕಂಪೆನಿಗೆ ಹೆಜ್ಜಿಂಗ್ ನಷ್ಟದ ಬಾಧೆ ಕಾಡಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.
ಇಂದಿನ ವಹಿವಾಟಿನಲ್ಲಿ ಏರಿಕೆ ಕಂಡ ಪ್ರತೀ ಒಂದು ಶೇರಿಗೆ ಪ್ರತಿಯಾಗಿ ನಾಲ್ಕು ಶೇರುಗಳು ಹಿನ್ನಡೆಗೆ ಗುರಿಯಾದವು.
ಟಾಟಾ ಮೋಟರ್ ಶೇರು ಶೇ.10ರಷ್ಟು ಕುಸಿದರೆ ಸನ್ ಫಾರ್ಮಾ ಶೇರು ಶೇ.4ರಷ್ಟು ಕುಸಿಯಿತು. ಐಸಿಐಸಿಐ ಬ್ಯಾಂಕ್, ಲಾರ್ಸನ್, ಅದಾನಿ ಪೋರ್ಟ್ ಮತ್ತು ಮಾರುತಿ ಸುಜುಕಿ ಶೇ.1ರಿಂದ ಶೇ.2ರಷ್ಟು ಕುಸಿದವು. ಆದರೆ ಐಟಿಸಿ, ಎಚ್ ಡಿ ಎಫ್ ಸಿ ಬ್ಯಾಂಕ್, ಟಿಸಿಎಸ್, ರಿಲಯನ್ಸ್ ಶೇರುಗಳು ತಕ್ಕಮಟ್ಟಿನ ಗಳಿಕೆಯನ್ನು ದಾಖಲಿಸಿದವು.