ಮುಂಬಯಿ: ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಅವರ ಪ್ರತಿಮೆಯೊಂದು ಅವರು ಆಡಿ ಬೆಳೆದ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಸ್ಥಾಪನೆಗೊಳ್ಳಲಿದೆ.
ಮಂಗಳವಾರ ಮುಂಬಯಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೋಲ್ ಕಾಳೆ ಈ ವಿಷಯವನ್ನು ತಿಳಿಸಿದರು.
ಇದು ಸಚಿನ್ ತೆಂಡುಲ್ಕರ್ ಅವರಷ್ಟೇ ಗಾತ್ರವನ್ನು ಹೊಂದಿದ್ದು, ಅವರು ಹುಟ್ಟಿದ ದಿನವಾದ ಎ. 24ರಂದು ಅನಾವರಣಗೊಳ್ಳುವ ಸಾಧ್ಯತೆ ಇದೆ. ಅಂದು ಸಚಿನ್‌ಗೆ 50 ವರ್ಷ ಪೂರ್ತಿಗೊಳ್ಳಲಿದೆ.
“ನನ್ನ ಕ್ರಿಕೆಟ್ ಬಾಲ್ಯ ಇಲ್ಲಿಯೇ ಮೊದಲ್ಗೊಂಡಿತ್ತು. ಮುಂಬಯಿಯನ್ನು ಪ್ರತಿನಿಧಿಸುವ ಮೂಲಕ ನನ್ನ ಕ್ರಿಕೆಟ್ ಪಯಣ ಆರಂಭಗೊಂಡಿತು. ಭಾರತ 2011ರಲ್ಲಿ ಈ ಕ್ರೀಡಾಂಗಣದಲ್ಲೇ ವಿಶ್ವಕಪ್ ಗೆದ್ದಿತು. ನಾನು ಭಾರತವನ್ನು ಪ್ರತಿನಿಧಿಸಿದ ಕೊನೆಯ ಟೆಸ್ಟ್ ಪಂದ್ಯವನ್ನೂ ಇಲ್ಲಿಯೇ ಆಡಲಾಯಿತು. ಅದು 200ನೇ ಟೆಸ್ಟ್ ಕೂಡ ಆಗಿತ್ತು. ಎಲ್ಲವೂ ಸ್ಮರಣೀಯ ವಿದ್ಯಮಾನಗಳು.
ಇದೀಗ ನನ್ನ ಪ್ರತಿಮೆಯೊಂದು ಇಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಎಂಸಿಎ ತಿಳಿಸಿದಾಗ ನಾನು ಅಚ್ಚರಿಗೊಂಡೆ. ಇಲ್ಲಿಗೆ ನನ್ನ ಕ್ರಿಕೆಟ್ ಬದುಕಿನ ಆವೃತ್ತವೊಂದು ಪೂರ್ಣಗೊಳ್ಳಲಿದೆ’ ಎಂದು ಸಚಿನ್ ತೆಂಡುಲ್ಕರ್ ಈ ಸಂದರ್ಭದಲ್ಲಿ ಹೇಳಿದರು. ಇಲ್ಲಿನ ಸ್ಟಾಂಡ್ ಒಂದಕ್ಕೆ ಈಗಾಗಲೇ ಸಚಿನ್ ಹೆಸರನ್ನು ಇಡಲಾಗಿದೆ.