Advertisement

ಕರ್ನಾಟಕದಲ್ಲಿ ಬೀಡುಬಿಟ್ಟಿರುವ ಮುಂಬಯಿ ನಾಯಕರು

04:10 PM May 08, 2018 | |

ಮುಂಬಯಿ: ಕರ್ನಾಟಕ ವಿಧಾನಸಭೆ ಚುನಾವಣೆಯನ್ನು 2019ರ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂಬ ದೃಷ್ಟಿಯಿಂದ ನೋಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಕರ್ನಾಟಕದ ಕೋಟೆಯನ್ನು ಗೆದ್ದುಕೊಳ್ಳಲು ಕಾಂಗ್ರೆಸ್‌ ಮತ್ತು ಬಿಜೆಪಿಯು ತಮ್ಮ ಸಂಪೂರ್ಣ ಶಕ್ತಿಯನ್ನು ಪ್ರಚಾರ ಕಾರ್ಯಗಳ ಮೇಲೆ ಹಾಕಿವೆ. ಒಂದೆಡೆಯಲ್ಲಿ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಚಹರೆಯನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆಯಲ್ಲಿ ಕಾಂಗ್ರೆಸ್‌ ಯಾವುದೇ ಪರಿಸ್ಥಿತಿಯಲ್ಲೂ ತನ್ನ ಈ ಬಲಿಷ್ಠ ಕೋಟೆಯ ಮೇಲೆ ಹಿಡಿತವನ್ನು ಕಾಯ್ದುಕೊಳ್ಳಲು ಎಲ್ಲಾ ತೆರನಾದ ಪ್ರಯತ್ನಗಳನ್ನು ಮಾಡುತ್ತಿದೆ.

Advertisement

ಮಾಯಾನಗರಿ ಮುಂಬಯಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಜನರು ನೆಲೆಸುತ್ತಾರೆ ಹಾಗೂ ಮುಂಬಯಿಯಲ್ಲಿ ರಾಜಕೀಯ ಮಾಡುವವರು ಎಲ್ಲಾ ಭಾಷೆಯ ಮತದಾರರ ಮೇಲೆ ಹಿಡಿತ ಹೊಂದಿರುತ್ತಾರೆ. ಚುನಾವಣಾ ನಿರ್ವಹಣೆಯಲ್ಲಿ ಇವರ ಪಾಂಡಿತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳ ಕೇಂದ್ರೀಯ ನಾಯಕತ್ವವು ಮುಂಬಯಿಯ ದಕ್ಷಿಣ ಭಾರತೀಯ ಹಾಗೂ ಉತ್ತರ ಭಾರತೀಯ ನಾಯಕರುಗಳಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯ ಜವಾಬ್ದಾರಿಯನ್ನು ನೀಡಿವೆ.

ಕರ್ನಾಟಕದಲ್ಲಿ ಒಟ್ಟು 224 ವಿಧಾನಸಭೆ ಸೀಟುಗಳಿದ್ದು, ಅವುಗಳಲ್ಲಿ 87 ಸೀಟುಗಳು ಕೇವಲ ಬೆಂಗಳೂರು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿವೆ. ಐಟಿ ಹಬ್‌ನ ರೂಪದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಹಾಗೂ ಅದರ ನೆರೆಯ ಪ್ರದೇಶಗಳಲ್ಲಿ ದೇಶದ ಇತರ ರಾಜ್ಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇವರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. 

ಮುಂಬಯಿಯಿಂದ ಕರ್ನಾ ಟಕ ಚುನಾವಣೆಯ ಪ್ರಚಾರ ಹಾಗೂ ನಿರ್ವಹಣೆಯ ಕೆಲಸದ ಮೇಲೆ ತೆರಳಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ಬೆಂಗಳೂರು ನಗರ ಮತ್ತು ಗ್ರಾಮೀಣ ಕ್ಷೇತ್ರಗಳ ಜವಾಬ್ದಾರಿಯನ್ನು ನೀಡಲಾಗಿದೆ. ಚುನಾವಣೆಯಲ್ಲಿ ಬೂತ್‌ಗಳ ನಿರ್ವಹಣೆಗಾಗಿ ಬಿಜೆಪಿಯು ಕಾರ್ಯತಂತ್ರವನ್ನು ರೂಪಿಸಿದೆ. ಪಕ್ಷವು ಪ್ರತ್ಯೇಕ ವಿಧಾನಸಭೆ ಕ್ಷೇತ್ರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಅವುಗಳಿಗೆ ಪ್ರತ್ಯೇಕವಾಗಿ ಪ್ರಭಾರಿಗಳನ್ನು ನೇಮಿಸಿದೆ. ತಳಮಟ್ಟದ ರಾಜಕೀಯದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.

ಶೇಲಾರ್‌ ಮತ್ತು ಶೆಟ್ಟಿ ನೇತೃತ್ವದಲ್ಲಿ ಮುಂಬಯಿ ಬಿಜೆಪಿಗರ ಪ್ರಚಾರ
ಮುಂಬಯಿ ಬಿಜೆಪಿ ಅಧ್ಯಕ್ಷ ಆಶಿಷ್‌ ಶೇಲಾರ್‌ ನೇತೃತ್ವದಲ್ಲಿ ದೊಡ್ಡ ತಂಡವೊಂದು ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈ ತಂಡದಲ್ಲಿ ಬಿಎಂಸಿಯಲ್ಲಿ ಬಿಜೆಪಿಯ ಗುಂಪಿನ ನಾಯಕ ಆಗಿರುವ ಮನೋಜ್‌ ಕೋಟಕ್‌, ದಕ್ಷಿಣ ಭಾರತ ಮೂಲದ ಶಾಸಕ ಕ್ಯಾಪ್ಟನ್‌ ತಮಿಲ್‌ ಸೆಲ್ವನ್‌, ನಗರಸೇವಕಿ ಕೃಷ್ಣಾ ವೆಲ್ಲಿ ರೆಡ್ಡಿ, ರಾಜೆಶ್ರೀ ಶಿರ್ವಾಡ್ಕರ್‌, ಸಮೀರ್‌ ದೇಸಾಯಿ, ಶೈಲೇಂದ್ರ ಸುವರ್ಣ, ಎ.ವಿ. ಕುಲಕರ್ಣಿ ಸಹಿತ ಇತರ ನಾಯಕರುಗಳ ಹೆಸರು ಸೇರಿವೆ.  ಸಂಸದ ಗೋಪಾಲ್‌ ಶೆಟ್ಟಿ ನೇತೃತ್ವದಲ್ಲಿ ಪ್ರತ್ಯೇಕ ತಂಡವೊಂದು ಕರ್ನಾಟಕ ವಿ.ಸ. ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಅದರಲ್ಲಿ ಜಯಪ್ರಕಾಶ್‌ ಠಾಕೂರ್‌, ಆರ್‌.ಯು. ಸಿಂಗ್‌, ಜ್ಞಾನಮೂರ್ತಿ ಶರ್ಮಾ, ಸುಧೀರ್‌ ಶೆಟ್ಟಿ, ಜಯಾನಂದ್‌ ಶೆಟ್ಟಿ, ಮಣಿ ಬಾಲನ್‌, ರಾಮ್‌ ಅರ್ಜುನ್‌ ಸಿಂಗ್‌ ಹಾಗೂ ಇತರ ವ್ಯಕ್ತಿಗಳು ಸೇರಿದ್ದಾರೆ. ಬೆಂಗಳೂರಿನಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಮೂಲದ ಮತದಾರರ ಸಂಖ್ಯೆ ಅಧಿಕವಾಗಿದೆ. ಅವರ ಅನಂತರ ಸ್ಥಳೀಯ ಕನ್ನಡಿಗರು ಹಾಗೂ ಉತ್ತರ ಭಾರತೀಯರು ಅಧಿಕವಾಗಿದ್ದಾರೆ. ಇವರೆಲ್ಲರನ್ನೂ ಪಕ್ಷದ ಕಡೆಗೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕ್ಯಾಪ್ಟನ್‌ ತಮಿಳ್‌ ಸೆಲ್ವಮ್‌ ನುಡಿದಿದ್ದಾರೆ.

Advertisement

ಮಾಜಿ ಸಚಿವ ಸುರೇಶ್‌ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್‌ ತಂಡದಿಂದ ಪ್ರಚಾರ

ಅದೇ, ಕಾಂಗ್ರೆಸ್‌ ತಂಡವು ಮಾಜಿ ಸಚಿವ ಸುರೇಶ್‌ ಶೆಟ್ಟಿ ನೇತೃತ್ವದಲ್ಲಿ  ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ಹಾಗೂ ಚುನಾವಣಾ ನಿರ್ವಹಣಾ ಕೆಲಸದಲ್ಲಿ ತೊಡಗಿದೆ. ಕಾಂಗ್ರೆಸ್‌ ನಗರಸೇವಕ ಜಗದೀಶ್‌ ಅಮೀನ್‌ ಕುಟ್ಟಿ, ಮಾಜಿ ನಗರಸೇವಕ ಶಿವಾನಂದ್‌ (ಶಿವಾ) ಶೆಟ್ಟಿ ಸೇರಿದಂತೆ ಇತರ ವ್ಯಕ್ತಿಗಳು ಪ್ರತ್ಯೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ರಾಜ್ಯಾದ್ಯಂತ ಕಾಂಗ್ರೆಸ್‌ಮಯ ವಾತಾವರಣವಿದ್ದು, ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಜಗದೀಶ್‌ ಅಮೀನ್‌ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next