ಮುಂಬಯಿ: ಮುಂಬಯಿ ಕನ್ನಡ ಸಂಘದ ವತಿಯಿಂದ ಡಾ| ರಜನಿ ವಿ. ಪೈ ಅವರಿಗೆ ಅಭಿನಂದನ ಕಾರ್ಯಕ್ರಮವು ಜೂ. 17ರಂದು ಸಂಘದ ಗ್ರಂಥಾಲಯದಲ್ಲಿ ನಡೆಯಿತು.
ಇತ್ತೀಚೆಗೆ ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿರುವ ಡಾ| ರಜನಿ ವಿ. ಪೈ ಅವರು ಬೆಂಗಳೂರು ಇಂಡಿಯನ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ವತಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದು, ಅವರನ್ನು ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು.
ಆರಂಭದಲ್ಲಿ ಶಾರದಾ ಯು. ಅಂಬೆಸಂಗೆ ಅವರು ಪ್ರಾರ್ಥನೆಗೈದರು. ಸಂಘದ ಉಪಾಧ್ಯಕ್ಷ ಡಾ| ಎಸ್. ಕೆ. ಭವಾನಿ ಅವರು ರಜನಿ ಪೈ ಅವರ ಸಾಧನೆಗಳನ್ನು ವಿವರಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ. ಎಸ್. ನಾಯಕ್ ಅವರು ವಹಿಸಿ ಮಾತನಾಡಿ, ರಜನಿ ಪೈ ಅವರಿಗೆ ಸಂದ ಗೌರವ ನಮಗೆಲ್ಲರಿಗೂ ಸಂತಸ ತಂದಿದೆ ಎಂದು ನುಡಿದು ಅಭಿನಂದಿಸಿದರು.
ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆ ನರ್ಮದಾ ಎಸ್. ಕಿಣಿ ಮತ್ತು ಪದಾಧಿಕಾರಿಗಳು ಡಾ| ರಜನಿ ವಿ. ಪೈ ಮತ್ತು ವಿನಾಯಕ ಪೈ ದಂಪತಿಯನ್ನು ಗೌರವಿಸಿದರು. ಸಾಹಿತ್ಯ ಬಳಗದ ಅಧ್ಯಕ್ಷ ಎಚ್. ಬಿ. ಎಲ್. ರಾವ್ ಮತ್ತು ಅಮಿತಾ ಎಸ್. ಭಾಗವತ್ ಅವರು ರಜನಿ ಪೈ ಅವರನ್ನು ಅಭಿನಂದಿಸಿದರು. ಕಮಲಾಕ್ಷ ಸರಾಫ್, ಸೋಮನಾಥ ಎಸ್. ಕರ್ಕೇರ ಅವರು ಅಭಿನಂದನ ಭಾಷಣಗೈದರು.
ಕಾರ್ಯಕ್ರಮದಲ್ಲಿ ಸುಧಾಕರ ಪೂಜಾರಿ, ಸತೀಶ್ ಬಂಗೇರ, ನಾರಾಯಣ ರಾವ್, ಸಂಧ್ಯಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ರಜನಿ ವಿ. ಪೈ ಅವರು ಮಾತನಾಡಿ, ತನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸೋಮನಾಥ ಎಸ್. ಕರ್ಕೇರ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಹಾಗೂ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.