ಮುಂಬಯಿ: ಮುಂಬೈ ಇಂಡಿಯನ್ಸ್ ಸತತ ಮೂರು ಸೋಲನುಭವಿಸಿ ಕೊನೆಯ ಸ್ಥಾನವನ್ನೇ ಗಟ್ಟಿ ಮಾಡಿ ಕೊಂಡಿದೆ. ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಎಲ್ಲ ದಿಕ್ಕುಗಳಿಂದಲೂ ಟೀಕೆಗೆ ಗುರಿಯಾಗಿದೆ. ಆದರೆ ಈ ಕುರಿತು ವಿಶೇಷವಾಗೇನೂ ತಲೆ ಕೆಡಿಸಿಕೊಳ್ಳದ ಅವರು, ಯಾವುದೇ ಕಾರಣಕ್ಕೂ ಹೋರಾಟ ಕೈ ಬಿಡುವುದಿಲ್ಲ ಎಂದು ಹೇಳಿದ್ದಾರೆ.
“ಈ ತಂಡದ ಬಗ್ಗೆ ನೀವು ಒಂದು ವಿಷಯವನ್ನು ಗಮನಿಸಿಬೇಕು, ನಾವು ಯಾವುದೇ ಕಾರಣಕ್ಕೂ ವಿಚಲಿತರಾ ಗುವುದಿಲ್ಲ. ಹೋರಾಟವನ್ನು ಕೈಬಿ ಡುವುದಿಲ್ಲ’ ಎಂಬ ಭರವಸೆಯ ಮಾತುಗಳನ್ನಾಡಿದರು.
ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯ ಅವರನ್ನು ಈ ಪಟ್ಟದಲ್ಲಿ ಕೂರಿಸಿದ ಬಳಿಕ ಮುಂಬೈ ತಂಡದಲ್ಲಿ ಹಾಗೂ ಅಭಿಮಾನಿಗಳಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಸುಳ್ಳಲ್ಲ. ಇದಕ್ಕೆ ಸರಿಯಾಗಿ ತಂಡ ಸತತವಾಗಿ ಸೋಲುತ್ತಲೇ ಇದೆ. ರೋಹಿತ್ ಅಭಿಮಾನಿಗಳು ಪಾಂಡ್ಯ ಅವರನ್ನು ಗುರಿ ಮಾಡಿ ಬಹಿರಂಗವಾಗಿಯೇ ಅಪಹಾಸ್ಯ ಮಾಡುತ್ತಿದ್ದಾರೆ.
ಅಂದಮಾತ್ರಕ್ಕೆ ಮುಂಬೈ ತಂಡಕ್ಕೆ ಸತತ ಸೋಲು ಹೊಸತೇನೂ ಅಲ್ಲ. 2015ರಲ್ಲಿ ಅದು ಚಾಂಪಿಯನ್ ಆಗುವ ಮುನ್ನ ಮೊದಲ 4 ಪಂದ್ಯಗಳನ್ನು ಸೋತದ್ದನ್ನು ನೆನಪಿಸಿಕೊಳ್ಳಬಹುದು.
ಶಿಸ್ತಿನ ಆಟ ಆಡಬೇಕು
“ನಮ್ಮ ಪಾಲಿಗೆ ಇದೊಂದು ಕಠಿನ ರಾತ್ರಿಯಾಗಿತ್ತು. ನಾವು ಯೋಜಿಸಿದ ರೀತಿಯಲ್ಲಿ ಆರಂಭ ಕಂಡುಕೊಳ್ಳಲು ವಿಫಲರಾದೆವು. 150ರಿಂದ 160ರಷ್ಟು ರನ್ ಗಳಿಸುವ ಅವಕಾಶವನ್ನು ಹೊಂದಿ ದ್ದೆವು. ಆದರೆ ನನ್ನ ವಿಕೆಟ್ ಪತನ ಪಂದ್ಯದ ಗತಿಯನ್ನು ಬದಲಿಸಿತು. ನಾನು ಇನ್ನಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು’ ಎಂದರು.
“ಸತತ ಸೋಲಿನ ಹೊರತಾಗಿಯೂ ನಾವು ಚೇತರಿಸಿಕೊಳ್ಳಬಲ್ಲೆವು. ಇನ್ನಷ್ಟು ಶಿಸ್ತಿನ ಆಟ, ಧೈರ್ಯ ಪ್ರದರ್ಶಿಸಬೇಕು’ ಎಂಬುದಾಗಿ ಪಾಂಡ್ಯ ಹೇಳಿದರು.