ಜೈಪುರ: ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಖಾತೆ ತೆರೆದಿದೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ತವರಿನಂಗಳದಲ್ಲಿ ಸೋಲನ್ನೂ ಅನುಭವಿಸಿದೆ. ಹೀಗಾಗಿ ರವಿವಾರ ಇಲ್ಲಿನ “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ನಲ್ಲಿ ಗೆಲ್ಲುವ ತಂಡ ಯಾವುದೆಂಬುದು ಕ್ರಿಕೆಟ್ ಅಭಿಮಾನಿಗಳ ಮುಂದಿರುವ ದೊಡ್ಡ ಪ್ರಶ್ನೆ.
ದಿನದ ಇನ್ನೊಂದು ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಎದುರಾಗಲಿವೆ. ಇದು ಸನ್‌ರೈಸರ್ ಪಾಲಿನ ತವರಿನ ಪಂದ್ಯವಾಗಿದೆ.
ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಸೋಲಿನ ಬಳಿಕ ಮಂಗಳವಾರ ಬೆಂಗಳೂರಿನಲ್ಲೇ ಆರ್‌ಸಿಬಿಗೆ ಆಘಾತವಿಕ್ಕಿ ಪ್ರಸಕ್ತ ಋತುವಿನ ಮೊದಲ ವಿಜಯೋತ್ಸವ ಆಚರಿಸಿದೆ. ನಾಯಕ ರೋಹಿತ್ ಶರ್ಮ ಕೂಡ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧ 94 ರನ್ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದದ್ದು ರೋಹಿತ್ ಹೆಚ್ಚುಗಾರಿಕೆ. ಒಮ್ಮೆ ಗೆಲುವಿನ ಹಾದಿ ಹಿಡಿದ ಬಳಿಕ ಮುಂಬೈಯನ್ನು ತಡೆಯುವುದು ಕಷ್ಟ ಎಂಬುದೊಂದು ವಾಡಿಕೆ.
ವೆಸ್ಟ್ ಇಂಡೀಸಿನ ಎವಿನ್ ಲೆವಿಸ್ ಕೂಡ 65 ರನ್ ಸಿಡಿಸಿ ಎದುರಾಳಿಗಳ ಮೇಲೆ ಅಪಾಯದ ಬಾವುಟ ಹಾರಿಸಿದ್ದಾರೆ. ಪಾಂಡ್ಯ ಬ್ರದರ್ ಓಕೆ. ಕೀಪರ್ ಇಶಾನ್ ಕಿಶನ್ ಸಖತ್ ಪ್ರದರ್ಶನ ನೀಡಿದ್ದಾರೆ. ಆದರೆ ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಕಣ್ಣಿಗೆ ಏಟು ಬಿದ್ದಿರುವುದರಿಂದ ಇಶಾನ್ ರವಿವಾರ ಕಣಕ್ಕಿಳಿಯುವುದು ಖಚಿತಪಟ್ಟಿಲ್ಲ. ಕೆರಿಬಿಯನ್‌ನ ಹಾರ್ಡ್ ಹಿಟ್ಟರ್ ಕೈರನ್ ಪೊಲಾರ್ಡ್ ಇನ್ನೂ ಸಿಡಿಯಲಾರಂಭಿಸಿಲ್ಲ ಎಂಬುದಷ್ಟೇ ಮುಂಬೈ ಬ್ಯಾಟಿಂಗ್ ಸರದಿಯ ಸದ್ಯದ ಸಮಸ್ಯೆ.ಜಸಪ್ರೀತ್ ಬುಮ್ರಾ, ಮಿಚೆಲ್ ಮೆಕ್ಲೆನಗನ್, ಮುಸ್ತಫಿಜುರ್ ರೆಹಮಾನ್, ಮಾಯಾಂಕ್ ಮಾರ್ಕಂಡೆ, ಪಾಂಡ್ಯಾಸ್ ಅವರನ್ನೊಳಗೊಂಡ ಮುಂಬೈ ಬೌಲಿಂಗ್ ವಿಭಾಗ ಕೂಡ ಘಾತಕವಾಗಿದೆ.
ಜೋಶ್ ತೋರದ ರಾಜಸ್ಥಾನ್
ಐದರಲ್ಲಿ 2 ಪಂದ್ಯ ಗೆದ್ದು ಸಾಮಾನ್ಯ ಮಟ್ಟದ ಪ್ರದರ್ಶನ ನೀಡಿರುವ ರಾಜಸ್ಥಾನ್ ರಾಯಲ್ಸ್ ಇನ್ನೂ ಅಪಾಯಕಾರಿಯಾಗಿ ಗೋಚರಿಸಿಲ್ಲ. ಚೆನ್ನೈ ವಿರುದ್ಧ ಶುಕ್ರವಾರ ಅನುಭವಿಸಿದ ಭಾರೀ ಅಂತರದ ಸೋಲು ಅಜಿಂಕ್ಯ ರಹಾನೆ ಪಡೆಗೆ ಸಹಜವಾಗಿಯೇ ಅಂಜಿಕೆ ಮೂಡಿಸಿದೆ.
ರಾಜಸ್ಥಾನ್ ಓಪನಿಂಗ್ ಈವರೆಗೆ ಸಂಪೂರ್ಣ ಕೈಕೊಟ್ಟಿದೆ. ಸಂಜು ಸ್ಯಾಮ್ಸನ್ ಒಂದು ಪಂದ್ಯದಲ್ಲಿ 94 ರನ್ ಬಾರಿಸಿದ ಬಳಿಕ ಮತ್ತೆ ಸಿಡಿಯಲು ಮರೆತಿದ್ದಾರೆ. ದಾಖಲೆ ಬೆಲೆಗೆ ಮಾರಾಟಗೊಂಡ ಎಡಗೈ ಬೌಲರ್ ಜೈದೇವ್ ಉನಾದ್ಕತ್ ಅವರದು ದೊಡ್ಡ ವೈಫಲ್ಯ. ಮೆಂಟರ್ ಶೇನ್ ವಾರ್ನ್ ತುರ್ತು ಕೆಲಸದ ನಿಮಿತ್ತ ಆಸ್ಟ್ರೇಲಿಯಕ್ಕೆ ತೆರಳಿದ್ದು ಕೂಡ ರಾಜಸ್ಥಾನ್‌ಗೆ ಎದುರಾದ ದೊಡ್ಡ ಹಿನ್ನಡೆಯೆಂದೇ ಹೇಳಬೇಕು.