ಮುಂಬಯಿ: “ವಾಂಖೇಡೆ ಸ್ಟೇಡಿಯಂ’ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರವಿವಾರದ ದ್ವಿತೀಯ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 20 ರನ್ ಜಯ ಸಾಧಿಸಿದೆ. ರೋಹಿತ್ ಶರ್ಮ ಅಮೋಘ ಶತಕದ ಹೊರತಾಗಿಯೂ ಮುಂಬೈ ಸೋಲಿನ ಕಹಿ ಉಂಡಿತು.
ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟಿಗೆ 206 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಮುಂಬೈ ರೋಹಿತ್ ಶರ್ಮ ಶತಕದ ಹೊರತಾಗಿಯೂ ಸೋಲು ಅನುಭವಿಸಿತು. ಇದು ಶರ್ಮ ಅವರ ಎರಡನೇ ಐಪಿಎಲ್ ಶತಕ.
ಇಶಾನ್ ಕಿಶನ್ 23, ತಿಲಕ್ ವರ್ಮ 31, ಸೂರ್ಯಕುಮಾರ್ ಶೂನ್ಯಕ್ಕೆ ಔಟಾದರು. ನಾಯಕ ಪಾಂಡ್ಯ 2 ರನ್ ಗಳಿಸಿ ವಿಫಲರಾದರು. ಅಮೋಘ ಇನ್ನಿಂಗ್ಸ್ ಆಡಿದ ರೋಹಿತ್ 63 ಎಸೆತಗಳಲ್ಲಿ 105 ರನ್ ಗಳಿಸಿ ಔಟಾಗದೆ ಉಳಿದರು. 11 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಬಿಗಿ ದಾಳಿ ನಡೆಸಿದ ಮಥೀಶ ಪತಿರಣ 28ಕ್ಕೆ 4 ವಿಕೆಟ್ ಕಬಳಿಸಿದರು.
ವನ್‌ಡೌನ್‌ನಲ್ಲಿ ಬಂದ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಅವರ ಅರ್ಧ ಶತಕ ಚೆನ್ನೈ ಸರದಿಯ ಆಕರ್ಷಣೆ ಆಗಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ಮಹೇಂದ್ರ ಸಿಂಗ್ ಧೋನಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 4 ವೈಡ್ ಸೇರಿದಂತೆ ಈ ಓವರ್‌ನಲ್ಲಿ 26 ರನ್ ಸೋರಿ ಹೋಯಿತು.
ಗಾಯಕ್ವಾಡ್ 40 ಎಸೆತಗಳಿಂದ ಸರ್ವಾಧಿಕ 69 ರನ್ ಬಾರಿ ಸಿ ದರು. ಈ ಆಕರ್ಷಕ ಆಟದ ವೇಳೆ 5 ಬೌಂಡರಿ, 5 ಸಿಕ್ಸರ್ ಸಿಡಿಯಿತು. ಆದರೆ ಆರಂಭಿಕನಾಗಿ ಇಳಿದ ಅಜಿಂಕ್ಯ ರಹಾನೆ ಕ್ಲಿಕ್ ಆಗಲಿಲ್ಲ. ಕೇವಲ 5 ರನ್ ಮಾಡಿ ವಾಪ ಸಾದರು. ರಚಿನ್ ರವೀಂದ್ರ ಗಳಿಕೆ 21 ರನ್. ಶಿವಂ ದುಬೆ ಮತ್ತೂಂದು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 38 ಎಸೆತಗಳಿಂದ 66 ರನ್ ಮಾಡಿ ಔಟಾಗದೆ ಉಳಿದರು (10 ಬೌಂಡರಿ, 2 ಸಿಕ್ಸರ್).
ಡ್ಯಾರಿಲ್ ಮಿಚೆಲ್ 17 ರನ್ ಮಾಡಿದರು. ಅಂತಿಮ ಓವರ್‌ನಲ್ಲಿ ಮಿಚೆಲ್ ವಿಕೆಟ್ ಉರುಳಿದ ಬಳಿಕ ಕ್ರೀಸ್ ಇಳಿದ ಧೋನಿ ನಾಲ್ಕೇ ಎಸೆತಗಳಿಂದ 20 ರನ್ ಮಾಡಿ ಔಟಾಗದೆ ಉಳಿದರು. ಸ್ಟ್ರೈಕ್‌ರೇಟ್ 500.00. ಮುಂಬೈ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಉರುಳಿಸಿದರು.
ಈ ಪಂದ್ಯಕ್ಕಾಗಿ ಚೆನ್ನೈ ಒಂದು ಬದಲಾವಣೆ ಮಾಡಿ ಕೊಂಡಿತು. ಸ್ಪಿನ್ನರ್ ಮಹೀಶ್ ತೀಕ್ಷಣ ಬದಲು ಪೇಸರ್ ಮತೀಶ ಪತಿರಣ ಅವರನ್ನು ಆಡಿಸಿತು. ಆದರೆ ಮುಂಬೈ ತಂಡದಲ್ಲಿ ಯಾವುದೇ ಪರಿವರ್ತನೆ ಸಂಭವಿಸಲಿಲ್ಲ.