ಮುಂಬಯಿ: ಮುಂಬಯಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಂಗಳವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನವು ಅಸ್ತವ್ಯಸ್ತಗೊಂಡಿತು.
ಬುಧವಾರವೂ ಭಾರೀ ಮಳೆಯಿಂದಾಗಿ ವಿಮಾನ, ಉಪನಗರ ಲೋಕಲ್ ರೈಲು ಸೇವೆಗಳಲ್ಲೂ ವಿಳಂಬ ಉಂಟಾಗಿದೆ. ಭಾರೀ ಮಳೆಯ ಕಾರಣ ಮುಂಬಯಿ ಮಹಾನಗರ ಪ್ರದೇಶದ ಶಾಲಾ- ಕಾಲೇಜುಗಳನ್ನು ಬುಧವಾರ ರಾಜ್ಯ ಸರಕಾರದ ಆದೇಶದಂತೆ ಬುಧವಾರ ಮುಚ್ಚಲಾಗಿತ್ತು. ದಕ್ಷಿಣ ಮುಂಬಯಿ, ಬೊರಿವಲಿ, ಕಾಂದಿವಲಿ, ಅಂಧೇರಿ ಮತ್ತು ಭಾಂಡುಪ್ ಸೇರಿದಂತೆ ಮಹಾ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆ ದಾಖಲಾಗಿದೆ.
ಲೋಕಲ್ ರೈಲು ಸೇವೆಯಲ್ಲಿ ವಿಳಂಬ: ದೈನಂದಿನ ಸುಮಾರು 70 ಲಕ್ಷ ಪ್ರಯಾಣಿಕರಿಗೆ ಸೇವೆಯನ್ನು ನೀಡುವ, ನಗರದ ಜೀವನಾಡಿ ಎಂದೇ ಗುರುತಿಸಿಕೊಂಡಿರುವ ಉಪನಗರ ರೈಲು ವ್ಯವಸ್ಥೆ ಮಳೆಯಿಂದಾಗಿ ಅಸ್ಯವ್ಯಸ್ತವಾಯಿತು. ಲೋಕಲ್ ರೈಲುಗಳ ಸಂಚಾರದಲ್ಲಿ ತೀವ್ರ ವಿಳಂಬ ಉಂಟಾಗಿದೆ. ಪಶ್ಚಿಮ ಮತ್ತು ಹಾರ್ಬರ್ ಮಾರ್ಗಗಳಲ್ಲಿ ಲೋಕಲ್ ರೈಲುಗಳ ಸಂಚಾರವು ದೀರ್ಘಾವಧಿಯ ವರೆಗೆ ಸ್ಥಗಿತಗೊಂಡು ಬಳಿಕ ಪುನರಾರಂಭವಾಗಿದೆ. ಲೋಕಲ್ ರೈಲುಗಳ ಸೇವೆಯಲ್ಲಿ ಸುಮಾರು 30ರಿಂದ 45 ನಿಮಿಷಗಳ ವಿಳಂಬ ಉಂಟಾಗಿದೆ.
ಕೆಲವು ಎಕ್ಸ್‌ಪ್ರೆಸ್ ರೈಲುಗಳು ರದ್ದಾಗಿದ್ದು, ಕೆಲವು ವಿಳಂಬವಾಗಿ ಹೊರಟಿವೆ. ಇಂಟರ್‌ಸಿಟಿಯ 6 ರೈಲು ಸೇವೆಗಳು ಬುಧವಾರ ರದ್ದಾಗಿದ್ದು ಗುರುವಾರವೂ ರದ್ದಾಗಲಿದೆ ಎಂದು ಮಧ್ಯ ರೈಲ್ವೇ ಹೇಳಿದೆ. ಮಳೆ ಕುರಿತಂತೆ ಮುನ್ಸೂಚನೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬುಧವಾರ ಕಚೇರಿಗೆ ತೆರಳದೆ, ತಮ್ಮ ಮನೆಗಳಲ್ಲಿ ಉಳಿದುಕೊಂಡ ಕಾರಣ ರೈಲುಗಳಲ್ಲಿ ಅಷ್ಟೊಂದು ಜನಸಂದಣಿ ಕಂಡುಬಂದಿಲ್ಲ.
ಬೆಸ್ಟ್ ಬಸ್‌ಗಳು ಬಂದ್: ಕೆಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿದ ಕಾರಣ ಬೆಸ್ಟ್ ಬಸ್‌ಗಳು ಬಂದ್ ಆಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಟ್ಯಾಕ್ಸಿ ಸೇವೆಯೂ ಸ್ಥಗಿತಗೊಂಡಿದೆ. ನಗರದ ಹೊರ ವಲಯಗಳಲ್ಲೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿರುವ ಬಗ್ಗೆ ವರದಿಯಾಗಿದೆ.