Advertisement

500ನೇ ರಣಜಿ ಪಂದ್ಯ ಆಡಲಿರುವ ಮುಂಬಯಿ

07:40 AM Nov 09, 2017 | Team Udayavani |

ಮುಂಬಯಿ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗುವ ಬರೋಡ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ “ಸಿ’ ಬಣದ ಪಂದ್ಯವು ನಮ್ಮ ಪಾಲಿಗೆ “ವಿಶೇಷ’ ಎಂದು ಮುಂಬಯಿ ತಂಡದ ನಾಯಕ ಆದಿತ್ಯ ತಾರೆ ಹೇಳಿದ್ದಾರೆ. 

Advertisement

ಈ ಪಂದ್ಯ ರಣಜಿ ಟ್ರೋಫಿಯ ಸುದೀರ್ಘ‌ ಇತಿಹಾಸದಲ್ಲಿ 41 ಬಾರಿಯ ಚಾಂಪಿಯನ್‌ ಆಗಿರುವ ಮುಂಬಯಿ ಆಡಲಿರುವ 500ನೇ ರಣಜಿ ಪಂದ್ಯವಾಗಲಿದೆ.

ಇದೊಂದು ನಮ್ಮ ಪಾಲಿಗೆ ವಿಶೇಷ ಪಂದ್ಯವಾಗಿದೆ. ಬಲಿಷ್ಠ ತಂಡವೊಂದು 500ನೇ ರಣಜಿ ಟ್ರೋಫಿ ಪಂದ್ಯ ಆಡುತ್ತಿರುವುದು ತುಂಬ ಖುಷಿ ನೀಡುತ್ತಿದೆ. ಇದೊಂದು ನಮ್ಮ ಪಾಲಿಗೆ ಬಲುದೊಡ್ಡ ಸ್ಮರಣೀಯ ಪಂದ್ಯವಾಗಲಿದೆ ಎಂದು ತಾರೆ ಹೇಳಿದ್ದಾರೆ. ಅಜಿಂಕ್ಯ ರಹಾನೆ ಮತ್ತು ಶ್ರೇಯ್‌ ಅಯ್ಯರ್‌ ಮರಳಿರುವ ಕಾರಣ ಮುಂಬಯಿ ಪರಿಪೂರ್ಣ ಶಕ್ತಿಯೊಂದಿಗೆ ಬರೋಡ ವಿರುದ್ಧ ಹೋರಾಡಲಿದೆ. ಹೀಗಾಗಿ ತಾರೆ ಬಹಳಷ್ಟು ಈ ಪಂದ್ಯ ಆಡಲು ಉತ್ಸುಕರಾಗಿದ್ದಾರೆ.

ರಣಜಿ ಟ್ರೋಫಿಯ ಆರಂಭದಿಂದ ಇಲ್ಲಿಯತನಕ ಮುಂಬಯಿ ತಂಡಕ್ಕೆ ಬಹಳಷ್ಟು ಮಂದಿ ಕೊಡುಗೆ ಸಲ್ಲಿಸಿದ್ದಾರೆ. ಅದೃಷ್ಟವಶಾತ್‌ ನಮ್ಮ ಪಾಲಿಗೆ 500ನೇ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ. ಮುಂಬಯಿ ತಂಡವನ್ನು ಪ್ರತಿನಿಧಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಾರೆ ಹೇಳಿದರು.

ಮುಂಬಯಿ ಕಳೆದ ಋತುವಿನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಫೈನಲ್‌ನಲ್ಲಿ ಮುಂಬಯಿ ತಂಡವನ್ನು ಕೆಡಹಿದ ಗುಜರಾತ್‌ ಚೊಚ್ಚಲ ಬಾರಿ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಮುಂಬಯಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬರೋಡ 4 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಮೂರು ಪಂದ್ಯಗಳನ್ನಾಡಿವೆ.

Advertisement

ಇದೊಂದು ತೀವ್ರ ಪೈಪೋಟಿಯ ಪಂದ್ಯವಾಗಿರಬಹುದು. ಆದರೆ ನಾವು ಪ್ರತಿಯೊಂದು ಪಂದ್ಯವನ್ನು ಹೊಸ ಪಂದ್ಯವೆಂದು ಭಾವಿಸುತ್ತೇವೆ. ಇದು ನಮಗೆ ಮುಖ್ಯ ಕೂಡ ಮತ್ತು ಗೆಲುವೊಂದು ನಮ್ಮ ಗುರಿ. ಸಕಾರಾತ್ಮಕವಾಗಿ ಆಡಿ ಗರಿಷ್ಠ ಅಂಕ ಗೆಲ್ಲಲು ಪ್ರಯತ್ನಿಸಲಿದ್ದೇವೆ ಎಂದು ತಾರೆ ಹೇಳಿದರು.ದೀರ್ಘ‌ ಸಮಯದ ಬಳಿಕ ನಾವು ವಾಂಖೇಡೆಯಲ್ಲಿ ಆಡುತ್ತಿದ್ದೇವೆ. ತವರಿನ ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸುವುದು ತಂಡವೂ ಬಲಿಷ್ಠವೂ ಆಗಿರುವುದು ಖುಷಿಯ ವಿಷಯ ಎಂದವರು ವಿವರಿಸಿದರು.

ಪ್ರತಿಯೊಂದು ಪಂದ್ಯ ನಮ್ಮ ಪಾಲಿಗೆ ಮುಖ್ಯವಾಗಿದೆ. ಯಾಕೆಂದರೆ ಅಂಕಪಟ್ಟಿಯಲ್ಲಿ ನಮಗಿಂತ ಎರಡು ತಂಡಗಳು ಮುನ್ನಡೆಯಲ್ಲಿವೆ. ಅಗ್ರಸ್ಥಾನಕ್ಕೇರುವುದು ನಮ್ಮ ಗುರಿಯಾಗಿದೆ ಎಂದ ಅವರು ನಾವು ಈಗಾಗಲೇ ಐದು ಶತಕ ಬಾರಿಸಿದ್ದೇವೆ. ಬ್ಯಾಟಿಂಗ್‌ ಶಕ್ತಿ ಬಲಿಷ್ಠವಾಗಿದೆ ಮತ್ತು ನಾವು ಉತ್ತಮ ಫಾರ್ಮ್ನಲ್ಲಿದ್ದೇವೆ ಎಂದರು.

ಬರೋಡ ತಂಡವನ್ನು ದೀಪಕ್‌ ಹೂಡ ಮುನ್ನಡೆಸಲಿದ್ದಾರೆ. ತಂಡ ಪಾಂಡ್ಯ ಸಹೋದರ ಸಹಿತ ಪಠಾಣ್‌ ಸಹೋದರರ ಸೇವೆಯಿಂದ ವಂಚಿತವಾಗಿದೆ. ಇರ್ಫಾನ್‌ ಪಠಾಣ್‌ ಕಳೆದ ವರ್ಷ ಬರೋಡ ತಂಡದ ನಾಯಕತ್ವ ವಹಿಸಿದ್ದರು. ಆದರೆ ಪಠಾಣ್‌ ಸಹೋದರರ ಅನುಪಸ್ಥಿತಿ ಬಗ್ಗೆ ಹೂಡ ಅಥವಾ ಮುಖ್ಯ ಕೋಚ್‌ ಅತುಲ್‌ ಬೆಡಾಡೆ ಅವರು ಕಾರಣಗಳನ್ನು ತಿಳಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next