ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನ ತತ್ತರಿಸಿದ್ದಾರೆ. ಮಳೆಯಿಂದಾಗಿ ರಾಯ್‌ಗಢ ಜಿಲ್ಲೆಯ ಇರ್‌ಶಲ್‌ವಾಡಿ ಗ್ರಾಮದಲ್ಲಿ ಬುಧವಾರ ನಡೆದಿದ್ದ ಭೂ ಕುಸಿತದಲ್ಲಿ ಸುಮಾರು 22 ಮಂದಿ ಸಾವನ್ನಪ್ಪಿದ್ದಾರೆ.
ಈ ದುರಂತದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದತ್ತು ತೆಗೆದುಕೊಳ್ಳಲಿದ್ದಾರೆ ಎಂದು ಶಿವಸೇನೆ ಮಾಹಿತಿ ನೀಡಿದೆ.
ʻಇರ್‌ಶಲ್‌ವಾಡಿ ದುರಂತದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಸಿಎಂ ಏಕನಾಥ್ ಶಿಂಧೆ ದತ್ತು ಸ್ವೀಕರಿಸಿ ಪೋಷಿಸಲಿದ್ದಾರೆ. 2-14 ವರ್ಷ ವಯಸ್ಸಿನ ಮಕ್ಕಳಿಗೆ ಸಿಎಂ ತಮ್ಮ ʻಶ್ರೀಕಾಂತ್ ಶಿಂಧೆ ಫೌಂಡೇಶನ್ʼನಲ್ಲಿ ಆಶ್ರಯ ನೀಡಲಿದ್ಧಾರೆ ಎಂದು ಶಿವಸೇನೆ ತಿಳಿಸಿದೆ.
ಈ ಮಕ್ಕಳ ಶಿಕ್ಷಣ ಮತ್ತು ಇತರ ಖರ್ಚುಗಳ ಬಗೆಗಿನ ಜವಾಬ್ದಾರಿಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ನೋಡಿಕೊಳ್ಳುತ್ತಿರುವ ʻಶ್ರೀಕಾಂತ್ ಶಿಂಧೆ ಫೌಂಡೇಶನ್ʼ ಕೈಗೆತ್ತಿಕೊಳ್ಳಲಿದೆ. ಪ್ರತೀ ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿ (ಎಫ್.ಡಿ) ಇರಿಸಲಾಗುವುದು. ಅದನ್ನು ಮಗುವಿನ ಶಿಕ್ಷಣಕ್ಕೆ ಉಪಯೋಗಿಸಿಕೊಳ್ಳಲಾಗುವುದು ಎಂದು ಏಕನಾಥ್ ಶಿಂಧೆ ಅವರ ವಿಶೇಷ ಅಧಿಕಾರಿ ಮಂಗೇಶ್ ಛಿತ್ವೆ ಹೇಳಿದ್ದಾರೆ.
ಮುಂಬೈನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಇರ್‌ಶಲ್‌ವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ 11 ಗಂಟೆಗೆ ನಡೆದಿದ್ದ ಭೂಕುಸಿತದಿಂದಾಗಿ ಈ ವರೆಗೆ 22 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರವೂ ರಕ್ಷಣಾ ಕಾರ್ಯ ಮುಂದುವರೆದಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಖಾರಿಗಳು ತಿಳಿಸಿದ್ದಾರೆ.
ಗುರುವಾರ ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ಸಿಎಂ ಏಕನಾಥ್ ಶಿಂಧೆ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಶಿಂಧೆ ಅವರಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ಧಾರೆ.
ಇದನ್ನೂ ಓದಿ: Dozen Snakes: ಮನೆಯಲ್ಲಿ ಅಡಗಿದ್ದ ಒಂದು ಹಾವನ್ನು ಹಿಡಿಯಲು ಹೋಗಿ ಸಿಕ್ಕಿದ್ದು 12 ಹಾವು