ನಾಗಪುರ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮುಂಬೈ ರಾಜ್ಯಕ್ಕೆ ಸೇರಿದ್ದು ಮತ್ತು ಯಾರಪ್ಪನದ್ದೂ ಅಲ್ಲ ಎಂದು ಬುಧವಾರ ಹೇಳಿ, ಎರಡು ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆ ಕರ್ನಾಟಕದ ಕೆಲ ನಾಯಕರ ಟೀಕೆಗಳನ್ನು ಬಲವಾಗಿ ಖಂಡಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಫಡ್ನವಿಸ್, ರಾಜ್ಯದ ಭಾವನೆಗಳನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಲಾಗುವುದು ಎಂದರು.
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ (ಎನ್ ಸಿಪಿ) ಕರ್ನಾಟಕ ಸಿಎಂ ಮತ್ತು ಸಚಿವರು ತಮ್ಮ ಹೇಳಿಕೆಗಳಿಂದ ಮಹಾರಾಷ್ಟ್ರದ ಹೆಮ್ಮೆಯನ್ನು ಘಾಸಿಗೊಳಿಸಿದ್ದಾರೆ ಆದರೆ ಅದಕ್ಕೆ ಮಹಾರಾಷ್ಟ್ರ ಸರ್ಕಾರದ ಪ್ರತಿಕ್ರಿಯೆ ಅದೇ ರೂಪದಲ್ಲಿಲ್ಲ ಎಂದು ಕಿಡಿಕಾರಿದರು.
“ಕರ್ನಾಟಕದ ಕಾನೂನು ಸಚಿವ ಮಧು ಸ್ವಾಮಿ ಅವರು ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಲಕ್ಷ್ಮಣ್ ಸವದಿ ಮುಂಬೈ ಕರ್ನಾಟಕಕ್ಕೆ ಸೇರಿದ್ದು ಎಂದು ಮರಾಠಿ ಜನರ ಗಾಯದ ಮೇಲೆ ಉಪ್ಪು ಸವರಿದ್ದಾರೆ ಎಂದು ಪವಾರ್ ಹೇಳಿದ್ದಾರೆ.
“ಕರ್ನಾಟಕ ಶಾಸಕರು ಅಥವಾ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳು ನಿರ್ಧರಿಸಿದ್ದಕ್ಕೆ ವಿರುದ್ಧವಾಗಿವೆ. ಈ ಕಾಮೆಂಟ್‌ಗಳು ಕೇಂದ್ರ ಗೃಹ ಸಚಿವರೊಂದಿಗಿನ ಸಭೆಯಲ್ಲಿ ನಿರ್ಧರಿಸಿದ್ದಕ್ಕೆ ಅನುಗುಣವಾಗಿಲ್ಲ. ಇದನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲಾಗುವುದು. ಮುಂಬೈ ಮೇಲೆ ಯಾವುದೇ ಹಕ್ಕನ್ನು ಸಹಿಸುವುದಿಲ್ಲ. ಇದನ್ನು ನಾವು ಖಂಡಿಸುತ್ತೇವೆ. ಈ ಹೇಳಿಕೆಗಳನ್ನು ಖಂಡಿಸಿ ನಾವು ಕರ್ನಾಟಕ ಸರ್ಕಾರಕ್ಕೆ ಪತ್ರ ಕಳುಹಿಸುತ್ತೇವೆ ಎಂದು ಫಡ್ನವಿಸ್ ಹೇಳಿದ್ದಾರೆ.
ಆದಿತ್ಯ ಠಾಕ್ರೆ ಕಿಡಿ
ಮುಂಬೈ ಮಹಾರಾಷ್ಟ್ರದ ಭಾಗವಾಗಿದೆ ಮತ್ತು ಅದನ್ನು ರಾಜ್ಯದಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಬುಧವಾರ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬೈ ಕೇಂದ್ರಾಡಳಿತ ಪ್ರದೇಶವಾಗಲು ಅರ್ಹತೆ ಇದೆ ಎಂಬ ಕರ್ನಾಟಕ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ಪ್ರಸ್ತುತ ನಾಗಪುರದಲ್ಲಿ ನಡೆಯುತ್ತಿದೆ. ಇಂತಹ ಮಂತ್ರಿಗಳಿಗೆ ನಾವು ಪ್ರಾಮುಖ್ಯತೆ ನೀಡಬಾರದು ಎಂದು ನಾನು ಭಾವಿಸುತ್ತೇನೆ. ಮುಂಬೈ ಮಹಾರಾಷ್ಟ್ರದ ಭಾಗವಾಗಿದೆ ಮತ್ತು ಅದನ್ನು ಯಾರೂ ಮಹಾರಾಷ್ಟ್ರದಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.