ಹೊಸದಿಲ್ಲಿ : ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಭದ್ರತಾ ಸಿಬಂದಿಗಳು, ತಪಾಸಣೆಗಾಗಿ ನನ್ನನ್ನು ಬಲವಂತದಿಂದ ವೀಲ್ ಚೇರ್ ನಿಂದ ಎತ್ತಿದರು’ ಎಂದು ವಿಕಲಾಂಗ ಮಹಿಳೆ ವಿರಾಲಿ ಮೋದಿ ಮಾಡಿರುವ ಟ್ವೀಟ್‌ಗೆ ಸೂಕ್ತವಾಗಿ ಸ್ಪಂದಿಸಿರುವ ನಾಗರಿಕ ವಾಯು ಯಾನ ಸಹಾಯಕ ಸಚಿವ ಜಯಂತ್ ಸಿನ್ಹಾ ಕ್ಷಮೆಯಾಚಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆಗೆ ಆಜ್ಞಾಪಿಸಿರುವ ಸಿನ್ಹಾ ಅವರು, “ಮುಂಬಯಿ ವಿಮಾನ ನಿಲ್ದಾಣದಲ್ಲಿ ನೀವು ಅನುಭವಿಸಿರುವ ಯಾತನೆಯಿಂದ ನಿಜಕ್ಕೂ ನನಗೆ ನೋವಾಗಿದೆ’ ಎಂದು ಹೇಳಿದ್ದಾರೆ.
ವಿಕಲಾಂಗ ಕಾರ್ಯಕರ್ತೆಯಾಗಿರುವ ವಿರಾಲಿ ಮೋದಿ ಅವರು ಮುಂಬಯಿ ವಿಮಾನ ನಿಲ್ದಾಣದಲ್ಲಿ ತಮಗಾದ ಕಹಿ ಅನುಭವವನ್ನು ಟ್ವಿಟರ್‌ನಲ್ಲಿ ತೋಡಿಕೊಂಡಿದ್ದರು. “ನನ್ನನ್ನು ವೀಲ್ ಚೇರ್‌ನಿಂದ ಬಲವಂತವಾಗಿ ಎತ್ತಿದ ಪರಿಣಾಮವಾಗಿ ನನಗೆ ಭಾರೀ ಕ್ರ್ಯಾಂಪ್ ಉಂಟಾದವು’ ಎಂದು ವಿರಾಲಿ ಮೋದಿ ಹೇಳಿದ್ದಾರೆ. ವಿರಾಲಿ ಮೋದಿ ಮುಂಬಯಿಯಿಂದ ಲಂಡನ್‌ಗೆ ಜೆಟ್ ಏರ್ ವೇಸ್ ಮೂಲಕ ಪ್ರಯಾಣಿಸುತ್ತಿದ್ದರು.
“ನನ್ನ ವೀಲ್ ಚೇರ್ ತಪಾಸಣೆ ಮಾಡಲಾದ ಬಳಿಕ ವಿಕಲಾಂಗಳಾದ ನನ್ನನ್ನು ನಿಂತುಕೊಳ್ಳುವಂತೆ ಹೇಳಲಾಯಿತು. ನನಗೆ ನಿಲ್ಲಲು ಸಾಧ್ಯವಿಲ್ಲ ಎಂದು ಎಷ್ಟೇ ಹೇಳಿದರೂ ಭದ್ರತಾ ಸಿಬಂದಿಗಳು ನನ್ನನ್ನು ಬಲವಂತವಾಗಿ ನಿಲ್ಲಿಸಿದರು. ಆ ಭದ್ರತಾ ಸಿಬಂದಿ ಮಹಿಳೆ ನನ್ನನ್ನು ಎತ್ತಿ ಹಿಡಿದು ನಿಲ್ಲಿಸಿ ಬೇರೊಬ್ಬ ಮಹಿಳೆಯಿಂದ ನನ್ನ ಪ್ರಷ್ಠ ಮತ್ತು ಬೆನ್ನನ್ನು ತಟ್ಟಿ ತಪಾಸಿಸುವಂತೆ ಹೇಳಿದರು. ಇವರ ಈ ಬಲವಂತದ ತಪಾಸಣೆಯಲ್ಲಿ ನನಗೆ ಭಾರೀ ಕ್ರಾಂಪ್ ಕಾಣಿಸಿಕೊಂಡವು’ ಎಂದು ವಿರಾಲಿ ಟ್ವೀಟ್‌ನಲ್ಲಿ ಹೇಳಿದ್ದಾರೆ.