Advertisement

ಮೂಳೂರು ತೊಟ್ಟಂ, ಉಳ್ಳಾಲದಲ್ಲಿ ಕಡಲ್ಕೊರೆತ ತೀವ್ರ

01:05 AM Jun 15, 2023 | Team Udayavani |

ಕಾಪು: ಬಿಪರ್‌ಜಾಯ್‌ ಚಂಡ ಮಾರುತದ ಪರಿಣಾಮ ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಅಲೆಗಳ ರಭಸಕ್ಕೆ ಕಲ್ಲು ಬಂಡೆಗಳ ತಡೆಗೋಡೆ ಸಮುದ್ರ ಪಾಲಾಗುತ್ತಿದೆ. ತೆಂಗಿನ ಮರಗಳು, ಭೂಭಾಗ ನೀರುಪಾಲಾಗಿ ಸ್ಥಳೀಯರು ಆತಂಕ ಪಡುವಂತಾಗಿದೆ.

Advertisement

ಲತಾ ಎಸ್‌. ಪೂಜಾರಿ, ರತ್ನಾ ಪೂಜಾರಿ, ಲೀಲಾ ಪೂಜಾರಿ, ಮಹಾಲಿಂಗ ಪೂಜಾರಿ, ದಿನೇಶ್‌ ಪೂಜಾರಿ, ನಳಿನಾಕ್ಷಿ ಪೂಜಾರಿ ಅವರ ಮನೆ ಸಮೀಪ ಕೊರೆತ ತೀವ್ರಗೊಂಡಿದ್ದು 2 ತೆಂಗಿನ ಮರಗಳು ಮತ್ತು ಹಿಂದೆ ಹಾಕಿದ್ದ ತಡೆಗೋಡೆಯ ಬೃಹತ್‌ ಬಂಡೆಗಳು ಸಮುದ್ರಕ್ಕೆ ಆಹುತಿಯಾಗಿವೆ. ಇನ್ನಷ್ಟು ತೆಂಗಿನ ಮರಗಳು ಸಮುದ್ರ ಪಾಲಾಗುವ ಭೀತಿ ಇದೆ. ಕಾಪು ಕಂದಾಯ ಅಧಿಕಾರಿ ಲೋಕನಾಥ್‌ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದು ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ನಷ್ಟದ ಬಗ್ಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.

ಸ್ಥಳೀಯರ ಆಕ್ರೋಶ: ಇಲ್ಲಿ ವರ್ಷದಿಂದ ವರ್ಷಕ್ಕೆ ಕಡಲ್ಕೊರೆತ ತೀವ್ರಗೊಳ್ಳುತ್ತಿದ್ದು ಹೆಚ್ಚಿನ ಹಾನಿಯುಂಟಾಗುತ್ತಿದೆ. ಕಳೆದ ವರ್ಷ ಸಂಸದರು, ಕೇಂದ್ರ-ರಾಜ್ಯ ಸಚಿವರು, ಶಾಸಕರು, ವಿಪಕ್ಷ ನಾಯಕರು, ಮಾಜಿ ಸಿಎಂ ಸಹಿತ ಹಲವರು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಅದರಂತೆ ಕಾಮಗಾರಿ ಆರಂಭಿಸಿದ್ದು ಕೆಲವೆಡೆ ಕಾಮಗಾರಿಗಾಗಿ ಹಾಕಿರುವ ಕಲ್ಲುಗಳೇ ಸಮುದ್ರ ಪಾಲಾಗಿವೆ. ಒಂದೆಡೆ ಕಾಮಗಾರಿ ನಡೆಯುತ್ತಿದ್ದರೆ ಮತ್ತೂಂದೆಡೆ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತು ಕಾಮಗಾರಿ
ಕಡಲ್ಕೊರೆತ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿರುವ ದಿಶಾ ಸಭೆಯಲ್ಲಿ ಜಿಲ್ಲಾಡಳಿತ ಮತ್ತು ಕೇಂದ್ರ ಸಚಿವರೊಂದಿಗೆ ಚರ್ಚಿಸ‌ಲಾಗಿದೆ. ಅಗತ್ಯವಿರುವಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅನುದಾನ ಬಳಸಿಕೊಂಡು ತುರ್ತಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ತಿಳಿಸಿದ್ದಾರೆ.

ಸೋಮೇಶ್ವರ: ಮೂರು ಮನೆಗಳು ಸಮುದ್ರಪಾಲು
ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿಯಲ್ಲಿ ಬೃಹತ್‌ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಕೆಲವು ದಿನಗಳಿಂದ ಚಂಡಮಾರುತದ ಪ್ರಭಾವದಿಂದ ಉಚ್ಚಿಲ ಬಟ್ಟಪ್ಪಾಡಿಯ ಭಾಗಶಃ ಕುಸಿದಿದ್ದ ಮನೆಗಳಿಗೆ ಇನ್ನಷ್ಟು ಹಾನಿಯಾಗಿತ್ತು. ಮೂರು ಮನೆಗಳು ಸಂಪೂರ್ಣ ಸಮುದ್ರ ಪಾಲಾಗಿವೆ. ತಾತ್ಕಾಲಿಕ ತಡೆಗೋಡೆಗೆ ಕಲ್ಲುಗಳನ್ನು ಹಾಕುವ ಕಾರ್ಯ ಮುಂದುವರಿದಿದೆ. ಉಳ್ಳಾಲ ಸೀಗ್ರೌಂಡ್‌ನ‌ಲ್ಲಿ ಸಮುದ್ರದ ಅಲೆಗಳಿಂದ ಹಾನಿಯಾಗುತ್ತಿದ್ದು, ಹಲವು ಮನೆಗಳು ಅಪಾಯದಂಚಿನಲ್ಲಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next