Advertisement

ಮುಲುಂಡ್‌ ಬಂಟ್ಸ್‌ ಹದಿಮೂರನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ತೆರೆ

05:09 PM Dec 18, 2018 | Team Udayavani |

ಮುಂಬಯಿ: ಬಂಟ ಸಮುದಾಯದ ವಿಶಾಲ  ಮನೋಧರ್ಮ ಸಮಾಜದ  ಪ್ರಗತಿಯ ಪ್ರತೀಕವಾಗಿದೆ. ಮುಂಬಯಿಯಂತಹ ಮಹಾ ನಗರದಲ್ಲಿ ನೆಲೆಸಿರುವ ಬಂಟ ಬಾಂಧವರ ಸಾಧನೆಯನ್ನು ಕಂಡಾಗ ಅಭಿಮಾನ ಉಕ್ಕಿ ಬರುತ್ತದೆ. ಇತರ ಜಾತಿ, ಧರ್ಮದವರೊಂದಿಗೆ, ಪ್ರಾಂತ್ಯದವರೊಂದಿಗೆ ಹೊಂದಿಕೊಳ್ಳುವ ಗುಣ ಬಂಟರ  ರಕ್ತದಲ್ಲಿ ಅಡಗಿದೆ. ಈ ಗುಣ ಬಂಟರನ್ನು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ. ಇದರೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಆಧುನಿಕತೆಯನ್ನು ಸ್ವಾಗತಿಸುವ ಜೊತೆಗೆ ನಮ್ಮ ಮೂಲ ಸಂಸ್ಕೃತಿ, ನಮ್ಮ ತುಳು-ಕನ್ನಡ ಭಾಷೆ, ದೈವ ದೇವರ ಬಗೆಗಿನ ನಮ್ಮ ನಂಬಿಕೆ ಎಲ್ಲವೂ ಯುವ ಜನಾಂಗದಿಂದ  ದೂರವಾಗುತ್ತಿರುವುದು ಇದರ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಮೂಡಬಿದ್ರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ| ಮೋಹನ್‌ ಆಳ್ವ ಅಭಿಪ್ರಾಯಿಸಿದರು.

Advertisement

ಡಿ. 15ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಮುಲುಂಡ್‌ ಬಂಟ್ಸ್‌ ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯುವ ಜನಾಂಗದಲ್ಲಿರುವ ಜ್ಞಾನ, ಶಕ್ತಿ, ಅವರಲ್ಲಿರುವ ಉತ್ಸಾಹ ಎಲ್ಲವನ್ನೂ ನಾವು ಸ್ವಾಗತಿಸುವುದರ ಜೊತೆಗೆ ಇಂದಿನ ಯುವ ವರ್ಗದಲ್ಲಿ ನಮ್ಮ ಮೂಲ ಆಚಾರ, ವಿಚಾರಗಳ ಬಗ್ಗೆ ಮನವರಿಕೆ ಮಾಡಬೇಕು. ಉಚ್ಚ ಶಿಕ್ಷಣ ಕೇವಲ ತರಗತಿಗೆ ಮಾತ್ರ ಸೀಮಿತವಾಗಿದ್ದು, ನಾವು ನಮ್ಮ ಆದರ್ಶಯುತ ಜೀವನ ಪದ್ಧತಿಯನ್ನು ಮೈಗೂಡಿಸಿಕೊಳ್ಳಬೇಕಾದರೆ ನಾವು ಬಯಲುಶಾಲೆಯ ವಿದ್ಯಾರ್ಥಿಗಳಾಗಬೇಕು. ನಾವೆಲ್ಲರು ನಮ್ಮ ಭಾಷೆ, ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕು ಎಂದು ಕರೆನೀಡಿದರು.

ಬದುಕಿನ ಬಗ್ಗೆ ಜಾಗೃತರಾಗಬೇಕು
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನಕುರ್ಕಿಲ್‌ಬೆಟ್ಟು ಸಂತೋಷ್‌ ಶೆಟ್ಟಿ ಅವರು ಮಾತನಾಡಿ, ನಮ್ಮ ಮಕ್ಕಳ ಬೆಳವಣಿಗೆ, ಅವರ ಜೀವನ ಶೈಲಿ, ನಮ್ಮ ನಾಳೆಯ ಬದುಕಿನ ಬಗ್ಗೆ ಜಾಗೃತರಾಗಬೇಕಾಗಿದೆ ಎನ್ನುವ ಮುನ್ಸೂಚನೆಯನ್ನು ನೀಡುತ್ತಿದೆ. ಹೊಟೇಲ್‌ ಉದ್ಯಮ ಬಂಟ ಸಮಾಜವನ್ನು ದೇಶ ವಿದೇಶಗಳಲ್ಲಿ ಪರಿಚಯಿಸಿದ ಹಿರಿಮೆಯನ್ನು ಹೊಂದಿದೆ. ತಂದೆಯ ಉದ್ಯಮವನ್ನು ಮಕ್ಕಳು ಮುನ್ನಡೆಸಲು ಹಿಂದೇಟು ಹಾಕುವ ಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಮೂಢನಂಬಿಕೆಗಿಂತ ಮೂಲ ನಂಬಿಕೆಗೆ ಒತ್ತು ನೀಡುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಪುಣೆಯಲ್ಲಿ ನಾವಿಂದು ಭವ್ಯ ಬಂಟರ ಭವನವನ್ನು ಕಟ್ಟು ವಲ್ಲಿ ಯಶಸ್ವಿಯಾಗಿದ್ದೇವೆ. ಇದು ಕೇವಲ ನನ್ನೊಬ್ಬನಿಂದ ಸಾಧ್ಯವಾದುದಲ್ಲ. ಇದರಲ್ಲಿ ದಾನಿಗಳ, ಸಂಘದ ಪದಾಧಿಕಾರಿಗಳು, ಸದಸ್ಯರ ಯೋಗದಾನ ಬಹಳಷ್ಟಿದೆ. ಈ ಭವನ ಕೇವಲ ಬಂಟರಿಗೆ ಮಾತ್ರವಲ್ಲ, ಎಲ್ಲಾ ಕನ್ನಡಿಗರ ಭವನವಾಗಿದೆ. ಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸುತ್ತಿದ್ದೇನೆ ಎಂದರು.

ಸಮ್ಮಾನ
ಮುಲುಂಡ್‌ ಪರಿಸರದ ಜನಪ್ರಿಯ ವೈದ್ಯರಾದ ಡಾ| ವಿಜಯ್‌ ಶೆಟ್ಟಿ ಹಾಗೂ ಡಾ| ಮಯೂರಿ ವಿ. ಶೆಟ್ಟಿ ದಂಪತಿ ಮತ್ತು ಅಂತಾರಾಷ್ಟ್ರೀಯ ಚಿತ್ರಕಲಾವಿದ ದೇವದಾಸ್‌ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಗಣ್ಯರು ಸಮ್ಮಾನಿಸಿ ಗೌರವಿಸಿದರು. 
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಸಂತ್‌ ಎನ್‌. ಶೆಟ್ಟಿ ಪಲಿಮಾರು, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್‌ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎನ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಎ. ಹರ್ಷವರ್ಧನ ಶೆಟ್ಟಿ, ಜತೆ ಕಾರ್ಯದರ್ಶಿ ಸುಧಾಕರ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಹರಿಪ್ರಸಾದ್‌ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮೋಹಿತ್‌ ಎಂ. ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ಸದಸ್ಯೆ ವಿನೋದಾ ರಾಮಕೃಷ್ಣ ಚೌಟ ಪ್ರಾರ್ಥನೆಗೈದರು. ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಎಸ್‌. ಬಿ. ಶೆಟ್ಟಿ, ಡಾ| ಸತ್ಯಪ್ರಕಾಶ್‌ ಶೆಟ್ಟಿ, ಟ್ರಸ್ಟಿ ರಮೇಶ್‌ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಗಣ್ಯರು ಸಮಾರಂಭಕ್ಕೆ ಚಾಲನೆ ನೀಡಿದರು. 
ಉಪಾಧ್ಯಕ್ಷ ವಸಂತ್‌ ಎನ್‌. ಶೆಟ್ಟಿ ಸ್ವಾಗತಿಸಿದರು. ಜಯ ಸೂಡಾ, ಜತೆ ಕಾರ್ಯದರ್ಶಿ ಸುಧಾಕರ ಆರ್‌. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಗಣ್ಯರನ್ನು ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಹುಂತ್ರಿಕೆ ಗೌರವಿಸಿದರು. ಕಾರ್ಯದರ್ಶಿ ಎನ್‌. ಉದಯ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಎಸ್‌. ಶೆಟ್ಟಿ ಅವರು ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಅಧ್ಯಕ್ಷ  ಮೋಹಿತ್‌ ಶೆಟ್ಟಿ ಅವರು ಯುವ ವಿಭಾಗದ ವಾರ್ಷಿಕ ವರದಿ ವಾಚಿಸಿದರು. ಜತೆ ಕೋಶಾಧಿಕಾರಿ ಪ್ರಸಾದ್‌ ಶೆಟ್ಟಿ, ಶ್ರೀನಿವಾಸ್‌ ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಸುವನೀತ್‌ ಶೆಟ್ಟಿ ಮತ್ತು ಲಹರಿ ಶೆಟ್ಟಿ ಅವರು ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್‌ ಶೆಟ್ಟಿ ವಂದಿಸಿದರು. ಸದಸ್ಯ-ಸದಸ್ಯೆಯರಿಂದ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಮಹಿಳಾ ವಿಭಾಗದ ಸದಸ್ಯೆಯರುಗಳಾದ ರೂಪಾ ಶೆಟ್ಟಿ, ಸುಷ್ಮಾ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್‌ ಸಿ. ಕೆ. ರಚಿಸಿ, ಕೃಷ್ಣರಾಜ್‌ ಶೆಟ್ಟಿ ನಿರ್ದೇಶನ, ವೇಣುಗೋಪಾಲ್‌ ಶೆಟ್ಟಿ ಅವರ ನಿರ್ವಹಣೆಯಲ್ಲಿ ಸದಸ್ಯ ಬಾಂಧವರಿಂದ ಮಲೆತ ಮೈಮೆ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

 ಮುಲುಂಡ್‌ ಪರಿಸರದ ಬಂಟ ಬಾಂಧವರ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಮುಲುಂಡ್‌ ಬಂಟ್ಸ್‌ ಇಂದು ಹದಿಮೂರು ವರ್ಷಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯ ಸಮಾಜಪರ ಯೋಜನೆಗಳನ್ನು ಸದಸ್ಯ ಬಾಂಧವರ ಮನೆ-ಮನಗಳಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದೇವೆ. ಗುತ್ತಿನ ಮನೆ ಎಂದೇ ಪ್ರಸಿದ್ಧಿಯನ್ನು ಪಡೆದ ಮುಲುಂಡ್‌ ಬಂಟ್ಸ್‌ನ ಜನಪ್ರಿಯತೆಯನ್ನು ಉಳಿಸಿ-ಬೆಳೆಸಿದ ಶ್ರೇಯಸ್ಸು ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯ ಬಾಂಧವರು, ದಾನಿಗಳಿಗೆ ಸಲ್ಲುತ್ತದೆ. ಸಂಸ್ಥೆಯು ಪ್ರಸ್ತುತ ನನ್ನ ಅಧ್ಯಕ್ಷತೆಯಲ್ಲಿ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದೊಂದಿಗೆ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಮುನ್ನಡೆಯುತ್ತಿದೆ ಎಂಬ ವಿಶ್ವಾಸ ನನಗಿದೆ.   ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಎಲ್ಲಾ ರೀತಿಯ ಸಮಾಜಪರ ಕಾರ್ಯಗಳಿಗೆ ಸರ್ವ ಸಹಕಾರ, ಪ್ರೋತ್ಸಾಹ ಸದಾಯಿರಲಿ.
   – ಪ್ರಕಾಶ್‌ ಶೆಟ್ಟಿ ಹುಂತ್ರಿಕೆ, ಅಧ್ಯಕ್ಷರು, ಮುಲುಂಡ್‌ ಬಂಟ್ಸ್‌ 

 ಕೇವಲ ಎಪ್ಪತ್ತೆ$çದು ಸದಸ್ಯರಿಂದ ಸ್ಥಾಪನೆಗೊಂಡ ಮುಲುಂಡ್‌ ಬಂಟ್ಸ್‌  ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಜಾತಿ, ಮತ, ಭೇದವಿಲ್ಲದೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಇನ್ನಿತರ ಕ್ಷೇತ್ರಗಳಲ್ಲಿ ಅಪಾರ ಸೇವೆಗೈದು ಬಂಟ ಬಾಂಧವರ ಪ್ರೀತ್ಯಾದರಗಳಿಗೆ ಪಾತ್ರವಾಗಿದೆ. ಸಂಸ್ಥೆಯ ಸಿದ್ಧಿ-ಸಾಧನೆಗಳು ಅಪಾರವಾಗಿದ್ದು, ನಮ್ಮ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ .

 ವಸಂತ  ಎನ್‌. ಶೆಟ್ಟಿ ಪಲಿಮಾರು, ಉಪಾಧ್ಯಕ್ಷರು, ಮುಲುಂಡ್‌ ಬಂಟ್ಸ್‌

Advertisement

Udayavani is now on Telegram. Click here to join our channel and stay updated with the latest news.

Next