ಕಲಬುರಗಿ: ಬಹಮನಿ ಸುಲ್ತಾನರ ಆಳ್ವಿಕೆ ಕಾಲದ ಗತವೈಭವ ಬಿಂಬಿಸುವ ಬಹುಮನಿ ಉತ್ಸವವನ್ನು ನಗರದಲ್ಲಿ ಮಾರ್ಚ್ 6ರಂದು ಏರ್ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು.
ಶುಕ್ರವಾರ ನಗರದ ಐವಾನ್ -ಇ-ಶಾಹಿ ಅತಿಥಿಬೃಹದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉತ್ಸವ ಇದಾಗಿದ್ದು, ಬಹುಮನಿ ಸುಲ್ತಾನರ ಆಳ್ವಿಕೆ ಕುರಿತು ಸಂಶೋಧನೆ ಕೈಗೊಂಡ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾಹಿತಿ, ಸಂಶೋಧಕರಿಂದ ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು ಎಂದರು.
ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲವನ್ನು ಶಾಲಾ ಮಕ್ಕಳಿಗೆ ತಿಳಿಸಿಕೊಡಲು ಉತ್ಸವಕ್ಕೂ ಮುನ್ನ ಶಾಲಾ-ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕು. ಬಹುಮನಿ ಸುಲ್ತಾನರ ನಾಣ್ಯಗಳ ಪ್ರದರ್ಶನ, ಚಿತ್ರಕಲೆಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಬಹುಮನಿ ಸುಲ್ತಾನರನ್ನಾಧರಿಸಿದ ಪುಸ್ತಕಗಳ ಮಾರಾಟ ಏರ್ಪಡಿಸಬೇಕು. ಕಲಬುರಗಿ ಕೋಟೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಸಾತ್ ಗುಮ್ಮಜ್‌ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ರೂಪಕ, ಖವ್ವಾಲಿ, ಘಜಲ್, ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಮುಖ್ಯಸ್ಥರು ಸಾಹಿತ್ಯಿಕ
ಕಾರ್ಯಕ್ರಮಗಳನ್ನು ಆಯೋಜಿಸಲು ಜವಾಬ್ದಾರಿ ವಹಿಸಬೇಕು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರಚಾರ ಸಮಿತಿಗಳನ್ನು ರಚಿಸಿ ಈ ಸಮಿತಿಗಳು ಆದಷ್ಟು ಬೇಗ ಸಭೆ ಸೇರಿ ಕಾರ್ಯಕ್ರಮಗಳನ್ನು ಮುಂಚಿತವಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಾಹಿತಿ ವಸಂತ ಕುಷ್ಠಗಿ, ಸುಜಾತಾ ಜಂಗಮಶೆಟ್ಟಿ, ಮಹಿಪಾಲರೆಡ್ಡಿ ಮುನ್ನೂರ್, ಪ್ರಭಾಕರ ಜೋಶಿ, ಶಂಕ್ರಯ್ಯ ಘಂಟಿ, ಸುರೇಶ ಬಡಿಗೇರ, ಖಾಜಿ ರಿಜ್ವಾನ್ ಸಿದ್ದಿಕ್ಕಿ, ಅಮ್ಜದ್ ಜಾವೀದ್, ಮಹ್ಮದ್ ಇಸ್ಮಾಯಿಲ್ ಪಾಲ್ಗೊಂಡಿದ್ದರು.