ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಅಗತ್ಯವಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಅತಿ ಶೀಘ್ರದಲ್ಲಿ ಆರಂಭಿಸಬೇಕು, ಆಸ್ಪತ್ರೆ ನಿರ್ಮಾಣಕ್ಕೆ ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿ ಕುಮಟಾದಿಂದ ಭಟ್ಕಳದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ತನಕ ಪಾದಯಾತ್ರೆಯಲ್ಲಿ ಬಂದ ಅನಂತಮೂರ್ತಿ ಹೆಗಡೆ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಸಲಲಿಸುವ ಪೂರ್ವ ಮಾತನಾಡಿ, ಕುಮಟಾದಿಂದ ಪಾದಯಾತ್ರೆ ಮಾಡಲು ಮುಖ್ಯ ಪ್ರೇರಣೆ ಹಾಗೂ ಶಕ್ತಿ ತುಂಬಿದವರು ಉಜಿರೆಯ ಬ್ರಹ್ಮಾನಂದ ಸ್ವಾಮೀಜಿಯವರು ಹಾಗೂ ಆದಿಚುಂಚನಗಿರಿಯ ನಿಶ್ಚಲಾನಂದ ಸ್ವಾಮೀಜಿಯವರು. ಸೋಮವಾರದಿಂದ ಪಾದಯಾತ್ರೆ ಹೊರಟ ನಂತರ ಎಲ್ಲಾ ಕಡೆಗಳಲ್ಲಿಯೂ ಕೂಡಾ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅನೇಕ ಜನಪ್ರತಿನಿದಿಗಳು, ಸಾರ್ವಜನಿಕರ ಬೆಂಬಲ ಅಪೂರ್ವವಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತ, ಅಪಘಾತ, ಕಿಡ್ನಿ, ಲಿವರ್ ಸಮಸ್ಯೆ ಉಂಟಾದಾಗ ನಾವು ದೂರದ ಹುಬ್ಬಳ್ಳಿ ಇಲ್ಲವೇ ಮಂಗಳೂರಿಗೆ ಹೋಗಬೇಕಾಗುತ್ತದೆ. ಇಡೀ ಜಿಲ್ಲೆಯಲ್ಲಿ ಒಬ್ಬರೂ ನ್ಯೂರೋ ಸರ್ಜನ್ ಇಲ್ಲ. ಅಪಘಾತ ಮುಂತಾದ ಸಂದರ್ಭದಲ್ಲಿ ತಲೆಗೆ ಪೆಟ್ಟು ಬಿದ್ದಾಗ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಸಿಕ್ಕಿದರೆ ಮಾತ್ರ ಆತ ಬದುಕಬಹುದು. ಆದರೆ ಇಲ್ಲಿ ಕನಿಷ್ಠ 4-5 ಗಂಟೆಗಳ ಪ್ರಯಾಣ ಅನಿವಾರ್ಯ. ಅಂತಹ ವ್ಯಕ್ತಿಯನ್ನು ಬದುಕಿಸುವುದು ಕಷ್ಟವಾಗುತ್ತದೆಯಲ್ಲದೇ ಆತನ ಕುಟುಂಬ ಅನಾಥವಾಗುತ್ತದೆ ಎಂದರು.
ಜಿಲ್ಲೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿ 12 ತಾಲೂಕುಗಳನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆ ಮುತ್ಸದ್ದಿ ರಾಜಕಾರಣಿಗಳನ್ನು, ಕಲಾವಿದರನ್ನು, ಪತ್ರಕರ್ತರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹೊಂದಿದ ಜಿಲ್ಲೆಯಾಗಿದ್ದು ಬುದ್ಧಿವಂತರ ಜಿಲ್ಲೆಯೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಜಿಲ್ಲೆಗೆ ಅಗತ್ಯವಿರುವ ಸುಸಜ್ಜಿತ ಮೆಡಿಕಲ್ ಕಾಲೇಜು ಅಥವಾ ಮಲ್ಟಿಸ್ಪೆಷಾಲಿಟಿ ಆಸ್ಸತ್ರೆ ಇಲ್ಲವಾಗಿದೆ. ಇದರಿಂದ ಅನೇಕ ಬಡವರು, ವಿದ್ಯಾವಂತರ ಜೀವ ಬಲಿಯಾಗುತ್ತಿದೆ. ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದ ಅವರು ಅತ್ಯಂತ ಉತ್ತಮ ವ್ಯಕ್ತಿತ್ವ ಇರುವ ಜಿಲ್ಲೆಯ ಜನರ ಕುರಿತು ಅಪಾರ ಕಾಳಜಿ ಹೊಂದಿರುವ ಮಂಕಾಳ ವೈದ್ಯ ಅವರು ಪ್ರಭಾವಿ ಸಚಿವರಾಗಿದ್ದು ಬಜೆಟ್‌ನಲ್ಲಿ ಹಣ ಬಿಡುಗಡೆಗೊಳಿಸುವಂತೆ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಒಂದಾನುವೇಳೆ ಆಸ್ಪತ್ರೆಯನ್ನು ಮಾಡದೇ ಇದ್ದಲ್ಲಿ ಸಚಿವರ ಕಚೇರಿಯ ಎದುರು ಆಮರಣಾಂತ ಉಪವಾಸ ಮಾಡುವುದಾಗಿಯೂ ಎಚ್ಚರಿಸಿದರು.
ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದ ಜಿಲ್ಲೆಯ ಹೋರಾಟಗಾರ ಚಿದಾನಂದ ಹರಿಜನ ಅವರು ಮಾತನಾಡಿ ನಾವು ಶಾಂತ ರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಇದನ್ನು ಸರಕಾರ ನಮ್ಮ ಅಸಾಯಕತೆ ಎಂತಾ ಭಾವಿಸಿದರೆ ಅದು ತಪ್ಪಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಉಗ್ರ ಸ್ವರೂಪ ತಳೆಯಲಿದ್ದು ವಿಷದ ಬಾಟಲಿಯೊಂದಿಗೆ ಬರುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡಿದರು.
ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆ ಬುಧವಾರ ಮಧ್ಯಾಹ್ನ ಭಟ್ಕಳ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ನೂರಾರು ಜನರು ಬೆಂಬಲ ವ್ಯಕ್ತಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು. ಪಾದಯಾತ್ರೆಯುದ್ದಕ್ಕೂ ಬೇಕೇ ಬೇಕು ಮುಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಘೋಷಣೆಯನ್ನು ಕೂಗುತ್ತಾ ಸಾಗಿದರು.