Advertisement

ಮೂಲ್ಕಿಗೆ ಮೆಸ್ಕಾಂ  ಉಪವಿಭಾಗ: ಹಳೆ ಕಟ್ಟಡವೇ ಗತಿ

02:17 PM Oct 27, 2017 | Team Udayavani |

ಮೂಲ್ಕಿ: ಇಲ್ಲಿಯ ಮೆಸ್ಕಾಂ ಕಚೇರಿಯನ್ನು ಎರಡು ವರ್ಷಗಳ ಹಿಂದೆಯೇ ಮೇಲ್ದರ್ಜೆಗೆ ಏರಿಸಲಾಗಿದ್ದು, ಸೂಕ್ತ ಸೌಲಭ್ಯಗಳಿಲ್ಲದೆ ಅದರ ಪೂರ್ಣ ಲಾಭ ಗ್ರಾಹಕರಿಗಿನ್ನೂ ಲಭ್ಯವಾಗುತ್ತಿಲ್ಲ.

Advertisement

ಮೂಲ್ಕಿಯನ್ನು ಉಪವಿಭಾಗವಾಗಿ ಮೇಲ್ದರ್ಜೆಗೇರಿಸಲು ಮೆಸ್ಕಾಂ ನಿರ್ಧರಿಸಿದ್ದರಿಂದ ಇಲ್ಲಿದ್ದ ಸೆಕ್ಷನ್‌ ಕಚೇರಿಯಲ್ಲಿ ಸ್ಥಳ ಹಾಗೂ ಸೌಲಭ್ಯಗಳು ಸಾಲದು. ಈ ಹಿನ್ನೆಲೆಯಲ್ಲಿ ಸೆಕ್ಷನ್‌ ಕಚೇರಿಯ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮೆಸ್ಕಾಂ ಮುಂದಾಗಿದೆ.

ಆದರೆ, ತಾತ್ಕಾಲಿಕವಾಗಿ ಒಂದು ಕಟ್ಟಡವನ್ನು ಬಾಡಿಗೆಗೆ ಪಡೆದು ಮೆಸ್ಕಾಂ ಉಪ ವಿಭಾಗದ ಕಚೇರಿ ಆರಂಭಿಸಿದ್ದು, ಸೌಲಭ್ಯಗಳಿಲ್ಲದೆ ಗ್ರಾಹಕರಿಗೆ ತೊಂದರೆಯಾಗಿದೆ. ಪೂರ್ಣ ಪ್ರಮಾಣದ ನಿರ್ವಹಣೆಗಾಗಿ ಹೊಸ ಕಟ್ಟಡವನ್ನು ಶೀಘ್ರದಲ್ಲೇ ನಿರ್ಮಾಣ ಮಾಡಬೇಕಾಗಿದೆ. 

ಈ ಹಿಂದೆ ಸುರತ್ಕಲ್‌ ಉಪ ವಿಭಾಗ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿಯಿತ್ತು. ಎರಡು ವರ್ಷಗಳಿಂದ ಮೂಲ್ಕಿ ಮೆಸ್ಕಾಂ ಕಚೇರಿಯನ್ನು ಉಪ ವಿಭಾಗೀಯ ಕಚೇರಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದರಿಂದ ಮೂಲ್ಕಿ -ಹಳೆಯಂಗಡಿಯ ವ್ಯಾಪ್ತಿಯ ವಿದ್ಯುತ್‌ ಗ್ರಾಹಕರು ತಮ್ಮ ಹೆಚ್ಚಿನ ಕೆಲಸ ಕಾರ್ಯಗಳನ್ನು ಮೂಲ್ಕಿ ಕಚೇರಿಯ ಮೂಲಕವೇ ಮಾಡಿಕೊಳ್ಳುವುದು ಸಾಧ್ಯವಾಗಿದೆ. 

ಆಡಳಿತಕ್ಕಾಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ನೇಮಕವಾಗಿದೆ. ಅವರಿಗೂ ಸೂಕ್ತವಾದ ಕಚೇರಿಯಿಲ್ಲದೆ ಸಮಸ್ಯೆಯಾಗಿದೆ.  ಗ್ರಾಹಕರಿಗೆ ಸೌಲಭ್ಯ ಸಿಗುವಂತೆ ಮಾಡುವ ದೃಷ್ಟಿಯಿಂದ ಇಲ್ಲಿ ವ್ಯವಸ್ಥಿತ ಕಟ್ಟಡ ನಿರ್ಮಾಣ ಆದಷ್ಟು ಶೀಘ್ರ ಗತಿಯಿಂದ ನಡೆಯಬೇಕಾಗಿದೆ. ಬಿಲ್‌ ಪಾವತಿ ಕೇಂದ್ರವನ್ನು ‘ಬೆಟ್ಟ’ದಿಂದ ಕೆಳಗೆತಂದು, ಜನರಿಗೆ ಸರಾಗವಾಗಿ ಸರದಿಯಲ್ಲಿ ನಿಲ್ಲುವಂತಹ ವ್ಯವಸ್ಥೆ ತುರ್ತಾಗಿ ಆಗಬೇಕಿದೆ. ಮೂಲ್ಕಿ ವಿದ್ಯುತ್‌ ಉಪ ವಿಭಾಗದ ಕಚೇರಿ ಬೇಗನೆ ನಿರ್ಮಾಣವಾಗಿ ಸೇವೆಗೆ ಲಭ್ಯವಾದರೆ ಸಾರ್ವಜನಿಕರಿಗೆ ಅನುಕೂಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಬಿಲ್‌ ಪಾವತಿಗೆ ತೊಂದರೆ
ಸದ್ಯಕ್ಕೆ ಕಚೇರಿಯ ಬಹುತೇಕ ವಿಭಾಗಗಳನ್ನು ಪಕ್ಕದಲ್ಲಿಯೇ ಇರುವ ಖಾನ್‌ ಪ್ಲಾಜಾ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ. ಆದರೆ ತಿಂಗಳ ವಿದ್ಯುತ್‌ ಬಿಲ್‌ ಪಾವತಿಸಲು ಬರುವ ಜನರಿಗೆ ಈ ತಾತ್ಕಾಲಿಕ ವ್ಯವಸ್ಥೆ ತೀವ್ರ ತ್ರಾಸದಾಯಕವಾಗಿದೆ. ಬಿಲ್‌ ಪಾವತಿಸಲು ಬರುವವರು ಬೆಟ್ಟ ಏರುವ ರೀತಿಯಲ್ಲಿ ಮೊದಲ ಮಹಡಿಯಲ್ಲಿ ಇರುವ ಪಾವತಿ ಕೇಂದ್ರಕ್ಕೆ ಸಾಲು ನಿಲ್ಲಬೇಕಾಗುತ್ತದೆ. ಮಾತ್ರವಲ್ಲ, ಕೌಂಟರ್‌ನಲ್ಲಿ ಬಹಳಷ್ಟು ನಿಧಾನಗತಿಯ ಸೇವೆ ದೊರೆಯುತ್ತಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸಾಲಲ್ಲಿ ನಿಲ್ಲುವುದೇ ಕಷ್ಟ. ಈ ಬಗ್ಗೆ ಯಾರಲ್ಲೂ ಹೇಳುವಂತಿಲ್ಲ ಎಂಬುದು ಗ್ರಾಹಕರ ದೂರು.

ಸಾರ್ವಜನಿಕರಿಗೆ ಅನುಕೂಲಕರ ವ್ಯವಸ್ಥೆ
ನೂತನ ಕಟ್ಟಡ ನಿರ್ಮಾಣದ ಕೆಲಸ ಆರಂಭಿಸುವ ಸಲುವಾಗಿ ಈಗಿರುವ ಹಳೆ ಕಚೇರಿಯನ್ನು ಸಮೀಪದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸೆಕ್ಷನ್‌ ಆಫಿಸರ್‌ ಮತ್ತು ಲೈನ್‌ ಮ್ಯಾನ್‌ಗಳ ನಿಲುಗಡೆ ವ್ಯವಸ್ಥೆ ಈಗ ಹಳೆಯ ಕಟ್ಟಡದಲ್ಲಿಯೇ ಇದೆ. ಇದನ್ನು ಪಕ್ಕದ ಇಲಾಖಾ ಎಂಜಿನಿಯರ್‌ಗಳ ವಸತಿ ಗೃಹಕ್ಕೆ ಆದಷ್ಟು ಬೇಗನೆ ಸ್ಥಳಾಂತರಿಸಲಾಗುವುದು. ವಸತಿಗೃಹದ ರಿಪೇರಿ ಕೆಲಸ ನಡೆಯುತ್ತಿದ್ದು, ಕಚೇರಿ ಸ್ಥಳಾಂತರವಾಗುವ ಸಂದರ್ಭ ಬಿಲ್‌ ಪಾವತಿ ವಿಭಾಗವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಸ್ಥಳಾಂತರ ಮಾಡಲು ಪ್ರಯತ್ನ ಮಾಡಲಾಗುವುದು.
ರಾಮಕೃಷ್ಣ ಐತಾಳ್‌
ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌
ಎಂಜಿನಿಯರ್‌, ಮೂಲ್ಕಿ ಉಪವಿಭಾಗ

ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next