Advertisement

“ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ಮರು ನಾಮಕರಣ

11:35 PM Sep 23, 2020 | mahesh |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್‌ ವೃತ್ತದಿಂದ ಲೈಟ್‌ಹೌಸ್‌ ಮಾರ್ಗದ ಕೆಥೋಲಿಕ್‌ ಕ್ಲಬ್‌ ವರೆಗಿನ ರಸ್ತೆಗೆ “ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಅಧಿಕೃತವಾಗಿ ಮರು ನಾಮಕರಣ ಮಾಡಿ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಸ್ತೆಯ ನಾಮಫಲಕ ಅನಾವರಣ ಬುಧವಾರ ನಡೆಯಿತು.

Advertisement

ಮೇಯರ್‌ ದಿವಾಕರ ಪಾಂಡೇಶ್ವರ ಅವರು ನಾಮಫ‌ಲಕವನ್ನು ಅನಾವರಣಗೊಳಿಸಿ ಮಾತನಾಡಿ, ಹಲವಾರು ಪ್ರಯತ್ನಗಳ ಬಳಿಕ ಈ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂಬುದಾಗಿ ಸರಕಾರ ಅಧಿಕೃತವಾಗಿ ಮರು ನಾಮಕರಣ ಮಾಡಿರುವುದು ಸಂತಸ ತಂದಿದೆ. ಇದು ಅವರ ಎಲ್ಲ ಅಭಿಮಾನಿಗಳು ಸಂಭ್ರಮ ಪಡುವ ದಿನವಾಗಿದೆ ಎಂದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಮಾತನಾಡಿ, ಜಿಲ್ಲೆಯಲ್ಲೇ ಹುಟ್ಟಿದ ವಿಜಯ ಬ್ಯಾಂಕನ್ನು ಉಳಿಸಿಕೊಳ್ಳಲಾಗಲಿಲ್ಲವೆಂಬ ನೋವು ಇವತ್ತಿಗೂ ಕಾಡುತ್ತಿದೆ. ಆದರೆ ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಮರು ನಾಮಕರಣ ಮಾಡುವ ಮೂಲಕ ಅವರ ಹೆಸರನ್ನು ನೆನಪಿಸುವ ಕೆಲಸ ಮಾಡಲಾಗಿದೆ ಎಂದರು.

ಮೂಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ, ಕಾರ್ಯಕಾರಿ ಅಧ್ಯಕ್ಷ ಎ.ಬಿ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಮಾತನಾಡಿದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಪ ಮೇಯರ್‌ ವೇದಾವತಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೂಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ, ಬಿಜೆಪಿ ಪಂಚಾಯತ್‌ ರಾಜ್‌ ನಗರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್‌ ಮಹಾಬಲ ಮಾರ್ಲ, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಗೋಪಾಲ ರೈ, ಕದ್ರಿ ನವನೀತ ಶೆಟ್ಟಿ, ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.

ನಾಮಫ‌ಲಕ ಅನಾವರಣದ ಬಳಿಕ ಸೇರಿದ್ದವರು ಚೆಂಡೆ, ಮದ್ದಳೆಯೊಂದಿಗೆ ಲೈಟ್‌ಹೌಸ್‌ನಿಂದ ಅಂಬೇಡ್ಕರ್‌ ವೃತ್ತದವರೆಗೆ ಮೆರವಣಿಗೆ ನಡೆಸಿದರು.

Advertisement

ಡಾ| ಹೆಗ್ಗಡೆ ಸಂತಸ
ಬೆಳ್ತಂಗಡಿ: ಇಂದು ವಿಜಯ ಬ್ಯಾಂಕ್‌ ಬ್ಯಾಂಕ್‌ ಆಫ್‌ ಬರೋಡದೊಂದಿಗೆ ಲೀನವಾಗಿ ತನ್ನ ಹೆಸ‌ರು ಮರೆ ಮಾಚಿ ಹೋದಾಗ ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗೆ ವಿಜಯ ಬ್ಯಾಂಕ್‌ನ ಸ್ಥಾಪಕಾಧ್ಯಕ್ಷ‌ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ಮರುನಾಮಕರಣ ಮಾಡಿರುವುದು ಅತ್ಯಂತ ಸೂಕ್ತ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯ ಪಟ್ಟಿದ್ದಾರೆ.

ತೀಕ್ಷ್ಣಮತಿಯಾಗಿದ್ದ ಸುಂದರ
ರಾಮ ಶೆಟ್ಟರು ಬ್ಯಾಂಕ್‌ನ ಅಧ್ಯಕ್ಷರಿಗಿದ್ದ ಸ್ವಾತಂತ್ರ್ಯವನ್ನು ಬಳಸಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ನೀಡಿದ್ದರು. ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಯ ಅಭಿ ನಂದನೀಯ ಎಂದು ಡಾ| ಹೆಗ್ಗಡೆ ಅವರು ತಿಳಿಸಿದ್ದಾರೆ.

ಮಾತು ಉಳಿಸಿದ ತೃಪ್ತಿ: ಕಾಮತ್‌
ಮೂಲ್ಕಿ ಸುಂದರರಾಮ ಶೆಟ್ಟಿ ಕರಾವಳಿಯ ಹೆಮ್ಮೆ. ಅವರಿಗೆ ಕರಾವಳಿಗರು ಒಂದಾಗಿ ಗೌರವ ಸಲ್ಲಿಸಬೇಕಿತ್ತು. ಆದರೆ ರಾಜಕೀಯ ಲಾಭಕ್ಕಾಗಿ ಅವರ ಹೆಸರಿಡುವ ಯೋಚನೆಗೆ ತಡೆ ತರಲಾಗಿತ್ತು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ನೇತೃತ್ವದಲ್ಲಿ ಈ ರಸ್ತೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಧಿವೇಶನ ನಡೆಯುತ್ತಿರುವ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಒಬ್ಬ ಶಾಸಕನಾಗಿ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರಿಡುವ ವಿಚಾರದಲ್ಲಿ ನಾನು ನೀಡಿದ್ದ ಮಾತನ್ನು ಉಳಿಸಿದ ತೃಪ್ತಿ ನನಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರ ಶ್ರಮವೂ ಅಭಿನಂದನೀಯ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ  ಡಿ. ವೇದವ್ಯಾಸ ಕಾಮತ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next