Advertisement
ಮಂಗಳೂರು: ನಗರದ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವ ಸರಕಾರದ ಆದೇಶಕ್ಕೆ ತಡೆಯಾಜ್ಞೆ ತಂದಿರುವುದರ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಜು. 29ರಂದು ಪುರಭವನದಲ್ಲಿ ನಡೆಯಲಿರುವ ಮುಲ್ಕಿ ಸುಂದರರಾಮ್ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ. ನಗರದ ಹೊಟೇಲ್ ಓಶಿಯನ್‌ಪರ್ಲ್ ಸಭಾಂಗಣದಲ್ಲಿ ಮಂಗಳವಾರ ಮುಲ್ಕಿ ಸುಂದರರಾಮ್ ಶೆಟ್ಟಿ ಅಭಿಮಾನಿ ಬಳಗ ಹಾಗೂ ವಿಜಯ ಬ್ಯಾಂಕ್ ವರ್ಕರ್ ಹಾಗೂ ಅಫೀಸರ್ಯೂ ನಿಯನ್ ಮಂಗಳೂರು ವಲಯ ವತಿಯಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಹಾಗೂ ಮುಲ್ಕಿ ಸುಂದರರಾಮ್ ಶೆಟ್ಟಿ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾಹಿತಿ ನೀಡಿದರು.
ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರಿಡುವ ಬಗ್ಗೆ ನಡೆದ ಎಲ್ಲ ಕಾನೂನು ಪ್ರಕ್ರಿಯೆಗಳು, ಸರಕಾರದ ಆದೇಶದ ಬಳಿಕ ನಾಮಕರಣ ಸಮಾರಂಭಕ್ಕೆ ಒಂದು ದಿನ ಬಾಕಿ ಇರುವಾಗ ಸರಕಾರ ನೀಡಿರುವ ತಡೆಯಾಜ್ಞೆ ಮಂಗಳೂರು ಮಹಾನಗರಪಾಲಿಕೆಗೆ ಮಾಡಿರುವ ಅವಮಾನವಾಗಿದೆ. ಇದು ಸಾರ್ವಜನಿಕರಿಗೆ ಮತ್ತು ಸಮಾಜದ ಎಲ್ಲ ಬಾಂಧವರಿಗೆ ಅಸಮಾಧಾನ ತಂದಿದೆ. ರಸ್ತೆ ಮರುನಾಮಕರಣ ಆಗುವ ತನಕ ಎಲ್ಲ ಜಾತಿ ಸಮುದಾಯದ ಬೆಂಬಲದೊಂದಿಗೆ ಹೋರಾಟ ನಡೆಸುವ ಬಗ್ಗೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಮಾಲೋಚನೆ ನಡೆಸಿ ನಿರ್ಣಯ ಕೈಗೊಂಡು ಕಾರ್ಯೋನ್ಮುಖರಾಗುತ್ತೇವೆ ಎಂದರು. ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಅಭಿಮಾನಿ ಬಳಗದ ಗೌರವಾಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಮಾತನಾಡಿ, ಮುಲ್ಕಿ ಸುಂದರರಾಮ್ ಶೆಟ್ಟಿ ಅವರು ಎಲ್ಲ ಜಾತಿ, ಧರ್ಮದ ಜನರ ಗೌರವಕ್ಕೆ ಪಾತ್ರರಾದ ಮೇರು ವ್ಯಕ್ತಿ. ಲೈಟ್ ಹೌಸ್ ಹಿಲ್ ರಸ್ತೆಗೆ ಅವರ ಹೆಸರು ಇಡುವ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿದೆ. ನಾಮಕರಣ ಮಾಡುವ ಕಾರ್ಯಕ್ರಮ ನಿಗದಿಯಾದ ಬಳಿಕ ಶಾಂತಿಭಂಗದ ನೆಪನೀಡಿ ತಡೆಯಾಜ್ಞೆ ತಂದಿರುವುದು ದುಃಖದ ವಿಷಯ. ರಸ್ತೆಗೆ ನಾಮಕರಣ ಮಾಡುವ ವಿಷಯವನ್ನು ನಾವು ಬಿಟ್ಟು ಕೊಡಲು ಸಾಧ್ಯವೇ ಇಲ್ಲ ಎಂದರು.
Related Articles
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಅಭಿಮಾನಿ ಬಳಗದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಮಾತನಾಡಿ, ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರಿಡುವ ಬಗ್ಗೆ ತಡೆಯಾಜ್ಞೆ ತಂದಿರುವುದು ಬೇಸರದ ವಿಷಯ. ನಾವು ಕಾನೂನು ತಪ್ಪಿ ಎಂದೂ ಹೋಗಿಲ್ಲ. ಅಶಾಂತಿ ಉಂಟು ಮಾಡಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ನಡೆಸುತ್ತೇವೆ ಎಂದರು.
Advertisement
ಮಾಜಿ ಸಚಿವ ಹಾಗೂ ಅಭಿಮಾನಿ ಬಳಗದ ಗೌರವ ಸಲಹೆಗಾರ ಕೆ. ಅಮರನಾಥ ಶೆಟ್ಟಿ ಅವರು ಮಾತನಾಡಿ, ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರಿಡುವ ಬಗ್ಗೆ ನಗರ ಪಾಲಿಕೆಯಲ್ಲಿ ಅವಿರೋಧ ನಿರ್ಣಯವಾಗಿತ್ತು. ನಿರ್ಣಯಕ್ಕೆ ಸಹಿಮಾಡಿದ ಜನಪ್ರತಿನಿಧಿಯೇ ಈಗ ವಿರೋಧಿಸುತ್ತಿದ್ದಾರೆ ಎಂದರು. ಬೇರೆ ರಸ್ತೆಗೆ ಸುಂದರರಾಮ್ ಶೆಟ್ಟಿ ಅವರ ಹೆಸರು ಇಡುವುದಕ್ಕೆ ನಾವು ಒಪ್ಪುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ವಿಜಯ ಬ್ಯಾಂಕ್ ವರ್ಕರ್ ಹಾಗೂ ಆಫೀಸರ್ ಯೂನಿಯನ್‌ನ ಮಾಜಿ ಅಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ, ಕೇಂದ್ರ ಸಂಘಟನೆಯ ಸಹಾಯಕ ಕಾರ್ಯದರ್ಶಿ ಸೀತಾಚರಣ್ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ, ಅಧ್ಯಕ್ಷ ಶ್ರೀಧರ್ ಶೆಟ್ಟಿ, ವಲಯ ಕಾರ್ಯದರ್ಶಿ ರಘುರಾಮ್ ಸುವರ್ಣ ಉಪಸ್ಥಿತರಿದ್ದರು.
ಮುಲ್ಕಿ ಸುಂದರರಾಮ್ ಶೆಟ್ಟಿ ಸಂಸ್ಮರಣೆಮುಲ್ಕಿ ಸುಂದರರಾಮ್ ಶೆಟ್ಟಿ ಅಭಿಮಾನಿ ಬಳಗ ಮತ್ತು ವಿಜಯ ಬ್ಯಾಂಕ್ ವರ್ಕರ್, ಆಫೀಸರ್ ಯೂನಿಯನ್ ವತಿಯಿಂದ ಬ್ಯಾಂಕಿಂಗ್ ಕ್ಷೇತ್ರದ ಹರಿಕಾರ ಮುಲ್ಕಿ ಸುಂದರ ರಾಮ್ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ ಜು. 29ರಂದು ಸಂಜೆ 4 ಗಂಟೆಗೆ ಪುರಭವನದಲ್ಲಿ ಜರಗಲಿದೆ. ಮುಲ್ಕಿ ಸುಂದರರಾಮ್ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು, ಅವರ ಸಾಧನೆಯನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವುದು ಹಾಗೂ ಎಲ್ಲ ಜಾತಿ, ಸಮುದಾಯದ ಬೆಂಬಲದೊಂದಿಗೆ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ಎಂದು ಮರುನಾಮಕರಣ ಆಗುವ ತನಕ ಹೋರಾಟ ನಡೆಸುವ ಬಗ್ಗೆ ಸಮಾಲೋಚನೆ ನಡೆಸಿ ನಿರ್ಣಯ ಕೈಗೊಂಡು ಕಾರ್ಯೋನ್ಮುಖರಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವಿವಿಧ ಸಮುದಾಯದ ಗಣ್ಯರು, ವಿಜಯ ಬ್ಯಾಂಕಿನ ವಲಯ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸುವರು ಎಂದು ಅಜಿತ್ ಕುಮಾರ್ ರೈ ಮಾಲಾಡಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಸುಂದರರಾಮ್ ಶೆಟ್ಟಿ ರಸ್ತೆ ನಾಮಕರಣ: ತಡೆಯಾಜ್ಞೆ ತೆರವು ಆಗ್ರಹಿಸಿ ಪ್ರತಿಭಟನೆ
ಪಡುಬಿದ್ರಿ: ಮಂಗಳೂರಿನಲ್ಲಿ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ನಾಮಕರಣಕ್ಕೆ ವಿಧಿಸಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪಡುಬಿದ್ರಿ ಬಂಟರ ಸಂಘ ಹಾಗೂ ಸುಂದರ ರಾಮ್ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಜು. 30ರ ಬೆಳಗ್ಗೆ 10 ಗಂಟೆಗೆ ಪಡುಬಿದ್ರಿ ಬಂಟರ ಸಂಘದಿಂದ ಜಾಥಾ ಹೊರಟು ಪಡುಬಿದ್ರಿ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಸ್ತೆ ನಾಮಕರಣಕ್ಕಾಗಿ ಮಂಗಳೂರು ಮಹಾ ನಗರಪಾಲಿಕೆ, ಜಿಲ್ಲಾ ಪೊಲೀಸ್ ಅಧಿಕಾರಿಗಳಿಂದ ಅನಮತಿ ಪಡೆದು ಉದ್ಘಾಟನೆಗಾಗಿ ದಿನ ನಿಗದಿಗೊಳಿಸಿದ ಬಳಿಕ ರಾಜ್ಯದ ಮುಖ್ಯಮಂತ್ರಿಗಳೇ ಮುಲ್ಕಿ ಸುಂದರ ರಾಮ್ ಶೆಟ್ಟಿಯವರಂತಹಾ ‘ಜಾತ್ಯತೀತ ಶಕ್ತಿ’ಯ ಹೆಸರನ್ನು ಬಳಸಿ ರಸ್ತೆ ನಾಮಕರಣವನ್ನು ಗೈಯುವ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಿರುವುದು ಸಮಾನ ಮನಸ್ಕರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪಡುಬಿದ್ರಿ ಬಂಟರ ಸಂಘ ಹಾಗೂ ಸುಂದರ ರಾಮ್ ಶೆಟ್ಟಿ ಅವರ ಅಭಿಮಾನಿ ಬಳಗದ ಪ್ರಕಟನೆಯಲ್ಲಿ ತಿಳಿಸಲಾಗಿದೆ.