ಮೂಲ್ಕಿ: ಬಿಲ್ಲವ ಸಮುದಾಯದಲ್ಲಿ ಸಂಘಟನೆಗಳು ವಿವಿಧ ಹಂತಗಳಲ್ಲಿ ದುಡಿಯುತ್ತಿದ್ದರೂ ರಾಜಕೀಯವಾಗಿ ಸಮಾಜಕ್ಕೆ ನಾಯಕರನ್ನು ಕೊಡಲು ಸಾಧ್ಯವಾಗದಿರುವುದಕ್ಕೆ ಕಾರಣ ಹುಡುಕಲು ನಮ್ಮನ್ನು ನಾವು ಆತ್ಮ ವಿಮರ್ಶೆಗೆ ಒಳಪಡಿಸಬೇ ಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಹೇಳಿದರು.
ಅವರು ಮೂಲ್ಕಿ ಮಹಾಮಂಡಲ ಭವನದಲ್ಲಿ ನಡೆದ ದ.ಕ., ಉಡುಪಿ, ಚಿಕ್ಕಮಗಳೂರು, ಗೋವಾ ಮತ್ತು ಶಿವಮೊಗ್ಗ ಮುಂತಾದ ಜಿಲ್ಲೆಗಳ ಸುಮಾರು 270ಕ್ಕೂ ಮಿಕ್ಕಿದ ಬಿಲ್ಲವ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಚಿಂತನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾ ಮಂಡಲದ ಉಪಾಧ್ಯಕ್ಷ ಡಾ| ರಾಜಶೇಖರ್ ಕೋಟ್ಯಾನ್ ಮಾತನಾಡಿ, ಸಮಾಜದ ಎಲ್ಲ ಸ್ತರಗಳ ಜನರ ಬಗ್ಗೆ ತಿಳಿದುಕೊಂಡು ಅವರ ಸಲಹೆ ಮತ್ತು ಸಂಪರ್ಕ ಪಡೆದು ಸಮಾಜವನ್ನು ಮುನ್ನಡೆಸುವ ನಾಯಕತ್ವ ನೀಡುವ ನಿಟ್ಟಿನಲ್ಲಿ ಮಹಾ ಮಂಡಲ ಶ್ರಮವಹಿಸುತ್ತಿದೆ ಎಂದರು.
ನಿವೃತ್ತ ಸೇನಾಧಿಕಾರಿ ಚಂದ್ರಶೇಖರ ಸುವರ್ಣ ಅವರು ಕಾರ್ಯಕ್ರಮದ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ, ಮಹಾ ಮಂಡಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪಕ್ಷ ಭೇದವಿಲ್ಲದೆ ಸಮಾಜದ ಸಂಘಟನೆಗಳಿಗೆ ತನ್ನಿಂಗಾಗುವ ಸಹಾಯ ಮತ್ತು ಮಾರ್ಗದರ್ಶನ ನೀಡಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.
ಪ್ರೊ| ಕೃಷ್ಣಪ್ಪ ಪೂಜಾರಿ ಮಾತನಾಡಿ, ಯುವಕರನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ ಕೆಲಸ ಜಾತಿ, ಸಂಘಟನೆಗಳ ಮೂಲಕ ಆಗಬೇಕಾಗಿದೆ ಎಂದರು. ವಿದ್ವಾಂಸ ಡಾ| ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ಬಿಲ್ಲವ ಸಮಾಜ ಎಲ್ಲ ವಿಧದಲ್ಲೂ ಬಲಷ್ಠವಾಗಿದೆಯೆ ಎಂಬ ಸಂಶಯ ಬೇಡ. ಪ್ರೀತಿಯಿಂದ ನಮ್ಮವರೆಂದು ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿ, ವಿಶ್ವಾಸದಿಂದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭ ಯುವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡಿಬೈಲ್ ಶುಭಶಂಸ ನೆಗೈದರು. ಕಟಪಾಡಿ ವಿಶ್ವನಾಥ ಕ್ಷೇತ್ರದ ಅಶೋಕ್ ಸುವರ್ಣ, ಮಂಡಲದ ಪದಾಧಿಕಾರಿಗಳಾದ ಪಿತಾಂಬರ ಹೆರಾಜೆ, ಮೋಹನ್‌ದಾಸ್ ಪಾವೂರು ಭಂಡಾರ ಮನೆ, ಯೋಗೀಶ್ ಕೋಟ್ಯಾನ್ ಚಿತ್ರಾಪು, ಗಂಗಾಧರ ಪೂಜಾರಿ, ಸಂತೋಷ್ ಕುಮಾರ್ ಉಪ್ಪೂರು, ಗಣೇಶ್ ಎಲ್. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.