ಮೂಲ್ಕಿ: ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿ ನಿಧಿಗಳು ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಅವಸರದಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾನು ಏಳು ತಿಂಗಳಿ ನಿಂದಲೂ ಸರಕಾರದ ಸವಲತ್ತುಗಳು ಜನರಿಗೆ ಆದಷ್ಟು ಬೇಗ ಕೈಸೇರಬೇಕು ಎಂಬ ಉದ್ದೇಶದಿಂದ ಶೇ. 90 ಅರ್ಜಿಗಳ ವಿಲೇ ವಾರಿ ಮಾಡಿ ಹಕ್ಕು ಪತ್ರ ವಿತರಿಸುವ ಮೂಲಕ ಆತ್ಮ ಸಂತೋಷ ಪಡೆದಿದ್ದೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಸರಕಾರದ ಕಂದಾಯ ಇಲಾಖೆ ಮೂಲ್ಕಿ ವಿಶೇಷ ತಹಶೀಲ್ದಾರರ ಕಚೇರಿಯಿಂದ 944 ಸಿ.ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿದ ಎರಡನೇ ಹಂತದ 96 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ಈಗಾಗಲೇ ಹಕ್ಕು ಪತ್ರ ಪಡೆದವರು ನೇರವಾಗಿ ಮೂಲ್ಕಿ ನಗರ ಪಂಚಾಯತ್ ಕಚೇರಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೆ ಬಂದು ಸಂಪರ್ಕಿಸಿದಲ್ಲಿ ಆಸ್ತಿಯ ಖಾತೆ ಮತ್ತು ನಳ್ಳಿನೀರು, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳ ಕೆಲಸ ಕಾರ್ಯಗಳನ್ನು ಒಂದೆ ವಾರದೊಳಗೆ ಪೂರ್ತಿಗೊಳಿಸಿ ಕೊಡಲಾಗುವುದು. ಸೂರಿಲ್ಲದವರಿಗೆ ಸೂರು ಯೋಜನೆಯಡಿ ಸಿಗುವ ಸಾಲ ಮತ್ತು ಅನುದಾನದ ಸಹಾಯ ಮೊತ್ತವನ್ನು ಒದಗಿಸಲಾಗುವುದು ಎಂದರು.
ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯಂ ಮಾತನಾಡಿ, ಸರಕಾರ ನೀಡುವ ಸವಲತ್ತುಗಳಿಗೆ ಸರಿಯಾದ ದಾಖಲೆಯನ್ನು ಸಮಯದಲ್ಲಿ ಒದಗಿಸಿದಾಗ ತಮ್ಮ ಕಚೇರಿಯಿಂದ ಎಲ್ಲ ರೀತಿಯ ಸವಲತ್ತು ಮತ್ತು ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡಲಾಗುವುದು ಎಂದರು.
ನ.ಪಂ. ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಸದಸ್ಯರಾದ ಪುತ್ತು ಬಾವಾ, ಬಶೀರ್ ಕುಳಾಯಿ, ಪುರುಷೋತ್ತಮ ರಾವ್, ಶಂಕರವ್ವ ಉಪಸ್ಥಿತರಿದ್ದರು. ನ.ಪಂ. ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ಶೆಣೈ ನಿರ್ವಹಿಸಿದರು. ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕರ್ ವಂದಿಸಿದರು.