ಬೆಂಗಳೂರು: ಝೈದ್ ಖಾನ್ ಚೊಚ್ಚಲ ಬಾರಿಗೆ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿರುವ ಬಹುನಿರೀಕ್ಷಿತ ಸಿನಿಮಾ ಬನಾರಸ್ ಬಿಡುಗಡೆಗೆ ಸಿದ್ಧವಾಗಿದೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರತಂಡ ಅದ್ಧೂರಿಯಾಗಿ ಪ್ರಚಾರ ಕಾರ್ಯ ಪ್ರಾರಂಭಿಸಿದೆ. ಮುಂಬೈನಲ್ಲಿ ಪ್ರಮೋಷನ್ ಕಹಳೆ ಮೊಳಗಿಸಿರುವ ಬನಾರಸ್ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಕೇರಳದ ಖ್ಯಾತ ವಿತರಣ ಸಂಸ್ಥೆ ತೆಕ್ಕೆಗೆ ಬನಾರಸ್ ಹಕ್ಕು ಸೇರ್ಪಡೆಯಾಗಿದೆ.
ಮಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿರುವ, ಹಲವು ಸೂಪರ್ ಹಿಟ್ ಚಿತ್ರಗಳನ್ನು ಬಿಡುಗಡೆ ಮಾಡಿರುವ ಮುಲಕುಪ್ಪಡನ್ ವಿತರಣೆ ಸಂಸ್ಥೆ ಈಗ ಬನಾರಸ್ ವಿತರಣೆ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪದಮ್ ಎಂದು ಕೇರಳದಲ್ಲಿ ಖ್ಯಾತಿ ಪಡೆದಿದ್ದಾರೆ.
ಉದ್ಯಮ ಕ್ಷೇತ್ರದ ಜೊತೆ ಜೊತೆಯಲಿ ವಿತರಣೆ ಹಾಗೂ ನಿರ್ಮಾಣ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಯಶಸ್ವಿಗಳಿಸಿದ್ದಾರೆ. ಗುಣಮಟ್ಟದ ಸಿನಿಮಾಗಳನ್ನು ಕೇರಳ ಸಿನಿಮಾ ಮಂದಿ ಮುಂದೆ ಪ್ರಸ್ತುತಪಡಿಸುವ ಈ ವಿತರಣೆ ಸಂಸ್ಥೆ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಸದ್ಯ ಅದೇ ನಿರೀಕ್ಷೆ ಬನಾರಸ್ ಮೇಲೆ ಇದೆ.
ಬನಾರಸ್ ಚಿತ್ರದ ಸ್ಯಾಂಪಲ್ಸ್ ಗೆ ಸಿಗುತ್ತಿರುವ ರೆಸ್ಪಾನ್ಸ್ ಕಂಡು ಥ್ರಿಲ್ ಆಗಿರುವ ಥಾಮಸ್ ಆಂಟೋನಿ ಉತ್ತಮ ಮೊತ್ತ ಕೊಟ್ಟು ಚಿತ್ರದ ಹಕ್ಕುಗಳನ್ನು ಖರೀದಿಸಿದ್ದಾರೆ. ಸಮಸ್ತ ಕೇರಳದ ತುಂಬೆಲ್ಲಾ ನವೆಂಬರ್ 4ರಂದು ಬನಾರಸ್ ಸಿನಿಮಾವನ್ನು ಅಚ್ಚುಕಟ್ಟಾಗಿ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಿನಿಮಾ ರಿಲೀಸ್ ಗೂ ಮೊದಲೇ ಝೈದ್ ಖಾನ್ ಚಿತ್ರಕ್ಕೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ಮೊದಲ ಸಿನಿಮಾದಲ್ಲಿಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದಿಬ್ಬಣ ಹೊರಡಲು ಸಜ್ಜಾಗಿರುವ ಝೈದ್ ಚಿತ್ರರಂಗದ ಭರವಸೆ ನಾಯಕನಾಗಿ ನಿಲ್ಲುವ ಎಲ್ಲಾ ಸೂಚನೆ ಸಿಕ್ಕಿದೆ.
ಜಯತೀರ್ಥ ನಿರ್ದೇಶನದ ಈ ಸಿನಿಮಾಕ್ಕೆ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಐದು ಭಾಷೆಯಲ್ಲಿ ತೆರೆಗೆ ಬರ್ತಿರುವ ಬನಾರಸ್ ಚಿತ್ರದಲ್ಲಿ ಝೈದ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಟಿಸಿದ್ದಾರೆ. ಒಂದಷ್ಟು ಹಿರಿಯ ತಾರಾಬಳಗವಿರುವ ಈ ಸಿನಿಮಾ ಮತ್ತೊಂದು ಯಶಸ್ವಿ ಪ್ಯಾನ್ ಇಂಡಿಯಾ ಚಿತ್ರವಾಗಬಹುದು ಅನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.