ಮುಳಬಾಗಿಲು: ತಾಲೂಕು ಆಡಳಿತ ಅಧಿಕಾರಿಗಳು ಹಳ್ಳಿಗಳಲ್ಲಿನ ಬಹುತೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿ, ಸರ್ಕಾರ ಮತ್ತು ಆಡಳಿತದ ಮೇಲೆ ಜನರಿಗೆ ನಂಬಿಕೆ ಮೂಡಿಸುವುದೇ ಗ್ರಾಮ ವಾಸ್ತವ್ಯದ ಉದ್ದೇಶ ಎಂದು ತಹಶೀಲ್ದಾರ್ ನಾಗರಾಜ್ ಹೇಳಿದರು.
ತಾಲೂಕಿನ ತಾಯಲೂರು ಹೋಬಳಿ ಚಿಕ್ಕಗುಟ್ಟ ಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಾಲೂಕು ಆಡಳಿತ ದಿಂದ ನಡೆದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಆರ್ಥಿಕ ಸ್ವಾವಲಂಬನೆಗೆ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಅಗತ್ಯ. ಇದರ ಜೊತೆಗೆ ಸರ್ಕಾರವನ್ನು ಹಳ್ಳಿಗಳತ್ತ, ಜನರ ಮನೆ ಬಾಗಿಲಿಗೆ ಕೊಂಡೊಯ್ದು, ಅವರ ಸಮಸ್ಯೆಗೆ ಸ್ಥಳೀಯ ವಾಗಿಯೇ ಪರಿಹಾರ ಕಂಡುಕೊಳ್ಳುವಂತಾಗಲು ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದಿದೆ ಎಂದರು.
ಗ್ರಾಪಂನಲ್ಲಿ ಸೌಲಭ್ಯ ನೀಡಲು ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸಂಪರ್ಕವಿರುವ ಎಲ್ಲಾ ಸಂಸ್ಥೆಗಳು ಸಮರ್ಪಕ ಕಾರ್ಯನಿರ್ವಹಿಸಿ ದಾಗ ಮಾತ್ರ ಜನಪರ ಸರ್ಕಾರ ಆಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮಾತ್ರವಲ್ಲ, ಇಡೀ ಸರ್ಕಾರವೇ ಗ್ರಾಮಗಳ ಕಡೆ ನಡೆದಿದೆ. ಅಭಿವೃದ್ಧಿ ಜನರ ಸುತ್ತಲೂ ಆಗಬೇಕು. ಆ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಸಾಮಾಜಿಕ ಭದ್ರತೆ ಮನೆ ಬಾಗಿಲಿಗೆ ಬರಬೇಕು. ಪ್ರತಿ ಗ್ರಾಪಂನಲ್ಲಿ ಸೌಲಭ್ಯ ಗಳು ನೀಡಲು ಯೋಜನೆ ರೂಪಿಸಲಾಗಿದ್ದು, ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಮದಲ್ಲಿ ಸ್ಮಶಾನವಿಲ್ಲದೇ ಶವ ಸಂಸ್ಕಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದರಿಂದ ಕೂಡಲೇ 30 ಗುಂಟೆಗಳ ಜಾಗವನ್ನು ಸ್ಥಳದಲ್ಲಿ ಸ್ಮಶಾನಕ್ಕೆ ಮಂಜೂರು ಮಾಡಿದರು. ಗ್ರಾಮದ ಅಂಚಿನಲ್ಲಿರುವ ಬೆಟ್ಟದ ಮೇಲೆ ಇರುವ ಪುರಾಣ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇಗುಲವು ಶಿಥಿಲಗೊಂಡಿದ್ದು, ಅದನ್ನು ಅಭಿವೃದ್ಧಿಪಡಿಸಿ ಅಲ್ಲಿ ಐಮಾಸ್ಟ್ ದೀಪ ಹಾಕಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಮನವಿ ಸಲ್ಲಿಸಿದರು. ಶಾಸಕರೊಂದಿಗೆ ಚರ್ಚಿಸಿ, ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗುವುದು ಎಂದರು.
ಶೀಘ್ರದಲ್ಲೇ ಪರಿಹಾರ: ಗ್ರಾಮಕ್ಕೆ ಬಸ್ ಕಲ್ಪಿಸಲು 3 ಅರ್ಜಿಗಳು, ಕಂದಾಯ ಇಲಾಖೆ 43 ಅರ್ಜಿಗಳು ಮತ್ತು ಗ್ರಾಪಂ ಕುರಿತಾದ 19 ಅರ್ಜಿಗಳು, ಲೋಕೋಪಯೋಗಿ ಇಲಾಖೆ ಕುರಿತಾಗಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಕಂದಾಯ ಇಲಾಖೆಯ ಅರ್ಜಿಗಳನ್ನು ಶೀಘ್ರವೇ ಬಗೆಹರಿಸಲಾಗುವುದು ಮತ್ತು ಇತರೇ ಇಲಾಖೆಗಳ ಕುರಿತಾದ ಅರ್ಜಿಗಳನ್ನು ತಿಂಗಳು ಒಳಗಾಗಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.
ತಾಪಂ ಇಒ ಡಾ.ಕೆ.ಸರ್ವೇಶ್, ಪಿಚ್ಚಗುಂಟ್ಲಹಳ್ಳಿ ಗ್ರಾಪಂ ಅದ್ಯಕ್ಷೆ ಅಲುವೇಲಮ್ಮ, ಉಪಾಧ್ಯಕ್ಷ ಸುನೀಲ್, ಟಿಎಚ್‌ಒ ಡಾ.ವರ್ಣಶ್ರೀ, ಉಪ ತಹಶೀಲ್ದಾರ್ ಮಂಜುನಾಥ್, ಪಿಡಿಒ ರವಣಪ್ಪ, ಉಪನ್ಯಾಸಕರಾದ ಶಂಕರಪ್ಪ, ಅಂಕಪ್ಪ, ಗ್ರಾಮ ಲೆಕ್ಕಿಗರಾದ ಲಕ್ಷ್ಮೀಕಾಂತ್, ದೇವರಾಜ್, ಉಷಾ, ಮುಖಂಡರಾದ ನಾಗಮಂಗಳ ಶಂಕರಪ್ಪ ಸೇರಿದಂತೆ ಚಿಕ್ಕಗುಟ್ಟಹಳ್ಳಿ, ದೊಡ್ಡಗುಟ್ಟಹಳ್ಳಿ ಗ್ರಾಮಸ್ಥರು ಹಾಜರಿದ್ದರು.