ನವದೆಹಲಿ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಆಪ್ತ ಮುಕುಲ್ ರಾಯ್ ತಮ್ಮ ನಿಷ್ಠರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ ಇದೀಗ ಮುಕುಲ್ ರಾಯ್ ಮತ್ತು ಪುತ್ರ ಸುಬ್ರಾಂಗಶು ರಾಯ್ ಟಿಎಂಸಿಗೆ ಮರಳುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯ ಅನ್ ಲಾಕ್: ರಾತ್ರಿ ಕರ್ಫ್ಯೂ , ವೀಕೆಂಡ್ ಕರ್ಫ್ಯೂ ಬಗ್ಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ
ಶುಕ್ರವಾರ(ಜೂನ್ 11) ಸಂಜೆ ಕೋಲ್ಕೊತಾದಲ್ಲಿರುವ ಟಿಎಂಸಿ ಕೇಂದ್ರ ಕಚೇರಿಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ. ಈ ಮಾತುಕತೆ ವೇಳೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡಾ ಹಾಜರಿರಲಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಇತ್ತೀಚೆಗೆ ಮುಕುಲ್ ರಾಯ್ ಅವರ ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಈ ಸಂದರ್ಭದಲ್ಲಿ ರಾಜಕೀಯ ಸಮೀಕರಣದಲ್ಲಿ ಬದಲಾವಣೆ ಸಾಧ್ಯತೆಯ ಊಹಾಪೋಹ ಹರಿದಾಡಿತ್ತು. ಅಲ್ಲದೇ ರಾಜ್ಯ ಬಿಜೆಪಿ ಘಟಕ ಮಂಗಳವಾರ ಕರೆದ ಸಭೆಗೂ ಮುಕುಲ್ ರಾಯ್ ಗೈರು ಹಾಜರಾಗಿದ್ದರು.
2017ರಲ್ಲಿ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಪಶ್ಚಿಮಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ರಾಯ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಭಿಷೇಕ್ ಬ್ಯಾನರ್ಜಿ ಜತೆಗಿನ ಜಟಾಪಟಿ ಸೇರಿದಂತೆ ಹಲವು ವಿಷಯಗಳಲ್ಲಿ ಅಸಮಧಾನಗೊಂಡು ಮುಕುಲ್ ರಾಯ್ ಟಿಎಂಸಿಯನ್ನು ತೊರೆದಿದ್ದರು.