ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಷೇರುಗಳ ಬೆಲೆ ಹೊಸ ಎತ್ತರ ತಲುಪಿದ ಬೆನ್ನಲ್ಲೇ ಸಂಸ್ಥೆಯ ಸಿಎಂಡಿ ಮುಖೇಶ್ ಅಂಬಾನಿ, ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪೈಕಿ 9ನೇ ಸ್ಥಾನಕ್ಕೇರಿದ್ದಾರೆ.
ಆರ್‌ಐಎಲ್ ಷೇರುಗಳ ಬೆಲೆ ಇದೇ ಮೊದಲ ಬಾರಿ 1,800 ರೂ. ತಲುಪಿದ ಹಿನ್ನೆಲೆಯಲ್ಲಿ ಮುಖೇಶ್ ಜಗತ್ತಿನ 10 ಶ್ರೀಮಂತರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಬ್ಲೂಮ್‌ಬರ್ಗ್ ಬಿಲೆನಿಯರ್ ಇಂಡೆಕ್ಸ್ ಪ್ರಕಾರ ಮುಖೇಶ್ ಅಂಬಾನಿ ಅವರು ಪ್ರಸ್ತುತ 4.9 ಲಕ್ಷ ಕೋಟಿ ರೂ.ಗಳ ಒಡೆಯರಾಗಿದ್ದಾರೆ.
ಈ ಮೂಲಕ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಈವರೆಗೆ 9ನೇ ಸ್ಥಾನದಲ್ಲಿದ್ದ ಒರ್ಯಾಕಲ್ ಕಾರ್ಪ್‌ನ ಲ್ಯಾರಿ ಎಲ್ಲಿಸನ್ ಅವರನ್ನು ಮುಖೇಶ್ ಹಿಂದಿಕ್ಕಿದ್ದಾರೆ.
ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ ನಲ್ಲಿ 1,759 ರೂ. ಇದ್ದ ಆರ್‌ಐಎಲ್ ಷೇರುಗಳ ಬೆಲೆ, ಸೋಮವಾರ 1804 ರೂ. ತಲುಪಿತು. ಇದರೊಂದಿಗೆ ಬಿಎಸ್‌ಇಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಬಂಡವಾಳವು 11.22 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.