ನ್ಯೂಯಾರ್ಕ್: ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಆಯೋಜಿಸಿದ್ದ ರಾಜ್ಯ ಔತಣಕೂಟದಲ್ಲಿ ದಿಗ್ಗಜ ಉದ್ಯಮಿಗಳಾದ ಮುಖೇಶ್ ಅಂಬಾನಿ-
ನೀತಾ ಅಂಬಾನಿ ದಂಪತಿ ಮತ್ತು ಆನಂದ್ ಮಹೀಂದ್ರಾ ಸೇರಿ ನೂರಕ್ಕೂ ಹೆಚ್ಚು ಗಣ್ಯಾತಿಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಮುಖ ಭಾರತೀಯ ಮೂಲದ ಉದ್ಯಮಿಗಳಾದ, ಸುಂದರ್ ಪಿಚೈ-
ಅಂಜಲಿ ಪಿಚೈ ದಂಪತಿ , ಸತ್ಯ ನಾಡೆಲ್ಲಾ, ಇಂದ್ರಾ ನೂಯಿ, ಆಪಲ್ ಸಿಇಒ ಟಿಮ್ ಕುಕ್ ಸಹ ಅತಿಥಿಯಾಗಿರು.
ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಸೇರಿದಂತೆ ಭಾರತ ಸರ್ಕಾರದ ಪ್ರತಿನಿಧಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಯುಎಸ್ ಸ್ಪೀಕರ್ ನ್ಯಾನ್ಸಿ ಪಲೋಸಿ ಮತ್ತು ಭಾರತದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಭಾರತೀಯ ಮೂಲದ ಪ್ರತಿನಿಧಿಗಳಾದ ರೋ ಖನ್ನಾ ಮತ್ತು ರಾಜಾ ಕೃಷ್ಣಮೂರ್ತಿ, ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಪ್ರಸಿದ್ಧ ಫ್ಯಾಷನ್ ಡಿಸೈನರ್ ರಾಲ್ಫ್ ಲಾರೆನ್ ಸಹ ಔತಣಕೂಟದಲ್ಲಿ ಹಾಜರಿದ್ದರು.
ಯುಎಸ್ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರ ಸಲಹೆಗಳಂತೆ ಅತಿಥಿ ಬಾಣಸಿಗ ನೀನಾ ಕರ್ಟಿಸ್ ಅವರೊಂದಿಗೆ ಶ್ವೇತಭವನದ ಇತರ ಬಾಣಸಿಗರು ರಾಜ್ಯ ಭೋಜನಕ್ಕೆ ಮೆನುವನ್ನು ಸಿದ್ಧಪಡಿಸಿದ್ದರು.ವಿಶೇಷವೆಂದರೆ ಸಿರಿಧಾನ್ಯಗಳಿಂದ, ಹಣ್ಣುಗಳಿಂದ ಸಿದ್ದಪಡಿಸಿದ ಕೆಲವು ಖಾದ್ಯಗಳಿದ್ದವು.
“ಭಾರತವು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಆಚರಿಸುತ್ತಿದೆ ಎಂದು ನಾವು ತುಂಬಾ ಸಂತಸಗೊಂಡಿದ್ದೇವೆ. ನಾವು ಸಿರಿಧಾನ್ಯಗಳನ್ನು ವಿಶೇಷ ಖಾದ್ಯಗಳಲ್ಲಿ ಸೇರಿಸಿದ್ದೇವೆ” ಎಂದು ನೀನಾ ಕರ್ಟಿಸ್ ಹೇಳಿದ್ದಾರೆ.