ಕುಳಗೇರಿ ಕ್ರಾಸ್( ಬಾಗಲಕೋಟೆ): ಪ್ರಸಿದ್ಧ ಕ್ಷೇತ್ರ ಚಿಮ್ಮನಕಟ್ಟಿ ಗ್ರಾಮದ ದೊಡ್ಡ ಲಾಲಸಾಬವಲಿ ದರ್ಗಾದಲ್ಲಿ ಮೂರು ದಿನಗಳ ಕಾಲ ನಡೆದ ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ ಆಚರಣೆಯು ಸಂಭ್ರಮ ಸಡಗರದಿಂದ ನಡೆಯಿತು.
ಅಗ್ಗಿ ಹಾಯುವುದು: ಟ್ರ್ಯಾಕ್ಟರ್ ಗಟ್ಟಲೇ ಕಟ್ಟಿಗೆ ಸಂಗ್ರಹಿಸಿ ಅಗ್ಗಿ ಕುಂಡ ತಯಾರಿಸುವ ಭಕ್ತರು ಇಡೀ ರಾತ್ರಿ ಕಟ್ಟಿಗೆ ಸುಟ್ಟು ಕೆಂಡ ಮಾಡುತ್ತಾರೆ. ಬೆಳಿಗ್ಗೆ ದರ್ಗಾಕ್ಕೆ ಆಗಮಿಸುವ ಲಾಲಸಾಬ ಅಜ್ಜ ಅಗ್ನಿ ಕುಂಡದಲ್ಲಿ ಎರಡು ಬಾರಿ ಹಾದು ಚಾಲನೆ ನೀಡುತ್ತಾರೆ. ನಂತರ ಡೋಲಿ ಹೊತ್ತವರು ಸೇರಿದಂತೆ ಬೇಡಿಕೊಂಡವರೆಲ್ಲ ಅಗ್ಗಿಯಲ್ಲಿ ಹಾಯುತ್ತಾರೆ. ನಂತರ ಹೇಳಿಕೆ ಹೇಳುವ ಅಜ್ಜನವರು ಮುಂಬರುವ ರಾಜ್ಯ ಹಾಗೂ ದೇಶದ ರಾಜಕೀಯ ವಿಷಯಗಳನ್ನ ನುಡಿಯುತ್ತಾರೆ.
ನೀರಿನಿಂದ ಪ್ರಜ್ವಲಿಸುವ ದೀಪ: ದೇಸಾಯಿಯವರ ಮನೆಯಲ್ಲಿನ ಗಂಧ ತಂದು ದೇವರಿಗೆ ಅರ್ಪಣೆ ಮಾಡಿ ಈ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಾವಿಯಲ್ಲಿನ ನೀರು ಬಿಂದಿಗೆಯಲ್ಲಿ ಭಕ್ತಿಯಿಂದ ತಂದು ದರ್ಗಾದಲ್ಲಿನ ದೀಪಗಳಿಗೆ ಹಾಕಿ ಅದೇ ನೀರಿನಿಂದ ದೀಪ ಬೆಳಗಿಸಿದರು.
ಪ್ರತಿ ವರ್ಷ ಹಿಂದೂ-ಮುಸ್ಲಿಂ ಸೇರಿ ಭಾವೈಕ್ಯದಿಂದ ಗಂಧರಾತ್ರಿ, ಕತ್ತಲರಾತ್ರಿ, ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ಸೇರಿದಂತೆ ಸುಮಾರು 3 ದಿನಗಳ ಕಾಲ ಮೊಹರಂ ಆಚರಣೆ ಮಾಡುತ್ತಾರೆ.
ಚಿಮ್ಮನಕಟ್ಟಿ ಮೊಹರಂ ವಿಶಿಷ್ಟ ಆಚರಣೆಯೊಂದಿಗೆ ಈ ಭಾಗದಲ್ಲಿ ಪ್ರಸಿದ್ಧಿ ಪಡೆದ ಹಿಂದೂ ಮುಸ್ಲಿಂ ಹಬ್ಬವಾಗಿದೆ. ಈ ಗ್ರಾಮದ ಮೊಹರಂ ಆಚರಣೆ ನೊಡಲು ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿ ವರ್ಷ ಬಂದು
ಸೇರುತ್ತಾರೆ.
ಕಮಿಟಿಯ ಸಂಚಾಲಕರಾದ ಲಾಲಸಾಬ ಜಾಲಿಹಾಳ ಅಜ್ಜನವರು, ಮೈಬುಸಾಬ ಚಿಕ್ಕೊಪ್ಪ, ರಂಜಾನ್‌ಸಾಬ ನರಗುಂದ, ಸೈಪುದ್ದಿನ್ ನರಗುಂದ, ಡಿ ಎನ್ ಪಾಟೀಲ, ವಿಠಲಗೌಡ್ರ ಪಾಟೀಲ, ದ್ಯಾಮನಗೌಡ ಪಾಟೀಲ್, ಸಿದ್ದಪ್ಪ ಗಂಜೆಪ್ಪನವರ, ಖಾಜಾಅಮೀನ್ ಬಹದ್ದೂರಖಾನ್, ಲಾಲಸಾಬ ನರಗುಂದ, ತಾಸಿಮ್‌ಸಾಬ ಚಿಕ್ಕೊಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.
ಗೋವಾ, ಪುಣೆ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು.