Advertisement

ಪೇಟೆಗೆ ಬಂದ ಮನು

09:41 AM Nov 23, 2019 | mahesh |

“ನನ್ನ ಹಿಂದಿನ ಎರಡು ಚಿತ್ರಗಳನ್ನು ನೋಡಿದವರೆಲ್ಲರೂ ಸಾಫ್ಟ್ ರೋಲ್‌ ಬಿಟ್ಟು ಮಾಸ್‌ ರೋಲ್‌ ಕಡೆಯೂ ಗಮನಹರಿಸಿ ಅಂದಿದ್ದರು. ಹಾಗಾಗಿ, ಈ ಚಿತ್ರದಲ್ಲಿ ಪಕ್ಕಾ ಮಾಸ್‌ ಮತ್ತು ಕ್ಲಾಸ್‌ ಆಗಿ
ಕಾಣಿಸಿಕೊಳ್ಳುತ್ತಿದ್ದೇನೆ…’

Advertisement

-ಹೀಗೆ ಹೇಳುತ್ತಾ ಹೋದರು ರವಿಚಂದ್ರನ್‌ ಪುತ್ರ ಮನುರಂಜನ್‌. ಅವರು ಹೇಳಿಕೊಂಡಿದ್ದು, “ಮುಗಿಲ್‌ ಪೇಟೆ’ ಸಿನಿಮಾ ಕುರಿತು. ಇತ್ತೀಚೆಗೆ ಚಿತ್ರಕ್ಕೆ ಪೂಜೆ ನೆರವೇರಿದೆ. ತಮ್ಮ ಪಾತ್ರದ ಕುರಿತು ಮನುರಂಜನ್‌ ಅಂದು ಹೇಳಿದ್ದಿಷ್ಟು. “ನನ್ನ ಹಿಂದಿನ “ಸಾಹೇಬ’ ಹಾಗೂ “ಬೃಹಸ್ಪತಿ’ ಚಿತ್ರದಲ್ಲಿ ಒಂದು ರೀತಿ ಸಾಫ್ಟ್ ಪಾತ್ರ ಮಾಡಿದ್ದೆ. ಎಲ್ಲೇ ಹೋದರು, ಸಾಫ್ಟ್ ಬಿಟ್ಟು ಬೇರೆ ಲುಕ್‌ನಲ್ಲಿ ಕಾಣಿಸಿಕೊಳ್ಳಿ ಎಂಬ ಮಾತುಗಳು ಕೇಳಿಬರುತ್ತಿದ್ದವು. ಹಾಗಾಗಿ, “ಮುಗಿಲ್‌ ಪೇಟೆ’ ಚಿತ್ರದಲ್ಲಿ ರಗಡ್‌ ಪಾತ್ರ ಮಾಡುತ್ತಿದ್ದೇನೆ. ಜೊತೆಗೆ ಸಾಫ್ಟ್ ಪಾತ್ರವೂ ಇದೆ. ಎರಡು ಶೇಡ್‌ ಇರುವಂತಹ ಪಾತ್ರವದು. ಇನ್ನು, ಈ ಸಿನಿಮಾ ಮಾಡೋಕೆ ಕಾರಣ, ಕಥೆ.

ಭರತ್‌ ನಾವುಂದ ಅವರ ಕಥೆಯನ್ನು ನಾನು ಎರಡು ವರ್ಷಗಳ ಹಿಂದೆಯೇ ಕೇಳಿದ್ದೆ. ಚೆನ್ನಾಗಿತ್ತು. ಆದರೆ, ನಾನು ಬೇರೆ ಸಿನಿಮಾ ಮಾಡುತ್ತಿದ್ದರಿಂದ ಮಾಡಲು ಸಾಧ್ಯವಾಗಿರಲಿಲ್ಲ. ಇನ್ನು, ನಿರ್ಮಾಪಕಿ ರಕ್ಷಾ ಮತ್ತು ಮೋತಿ ಮಹೇಶ್‌ ಇಬ್ಬರೂ ಫ್ರೆಂಡ್ಸ್‌. ನಾವು ಭೇಟಿಯಾದಾಗೆಲ್ಲ ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಚರ್ಚಿಸುತ್ತಿದ್ದೆವು. ತುಂಬ ಗಂಭೀರವಾಗಿ ಮಾತನಾಡಿದಾಗ, ಈ ಕಥೆಯನ್ನು ಕೇಳಿ, ಇಷ್ಟವಾದರೆ ಮಾಡೋಣ ಅಂದೆ. ಅವರಿಗೂ ಈ ಕಥೆ ಇಷ್ಟವಾಯ್ತು. ಈಗ ಚಿತ್ರೀಕರಣಕ್ಕೆ ಹೋಗುವಲ್ಲಿಗೆ ತಂಡ ರೆಡಿಯಾಗಿದೆ. ಚಿತ್ರದಲ್ಲಿ ನಾನು ನಾಯಕಿ ಜೊತೆ ಸದಾ ಜಗಳ ಆಡುವಂತಹ ಪಾತ್ರ ಮಾಡಿದ್ದೇನೆ. ಇಲ್ಲಿ ಹೇರ್‌ಸ್ಟೈಲ್‌ನಿಂದ ಹಿಡಿದು, ಬಾಡಿ ಲಾಂಗ್ವೇಜ್‌ ಕೂಡ ಹೊಸದಾಗಿರಲಿದೆ’ ಎಂದರು ಮನುರಂಜನ್‌.

ನಿರ್ದೇಶಕ ಭರತ್‌ ನಾವುಂದ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ “ಅಡಚಣೆಗಾಗಿ ಕ್ಷಮಿಸಿ’ ಚಿತ್ರ ಮಾಡಿದ್ದರು. “ಮುಗಿಲ್‌ ಪೇಟೆ’ ಒಂದು ಅಪ್ಪಟ ಕನ್ನಡತನ ಹೊಂದಿರುವ ಚಿತ್ರ. ಮಡಿಕೇರಿ ಸಮೀಪ ಇರುವ ಮಂದಲ್‌ಪಟ್ಟಿ ಊರ ಹೆಸರನ್ನು ಸ್ವಲ್ಪ ಬದಲಿಸಿಕೊಂಡು ನಾನು “ಮುಗಿಲ್‌ ಪೇಟೆ’
ಅಂದಿಟ್ಟುಕೊಂಡು, ಚಿತ್ರ ಮಾಡುತ್ತಿದ್ದೇನೆ. ಹಾಗಂತ ಆ ಊರಿಗೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಇದೊಂದು ಅಪ್ಪಟ ಲವ್‌ಸ್ಟೋರಿ. ಇಲ್ಲಿ ಲವ್‌, ಫಿಲ್‌, ಸೆಂಟಿಮೆಂಟ್‌, ಎಮೋಶನ್‌, ಆ್ಯಕ್ಷನ್‌, ಫ್ರೆಂಡ್‌ ಶಿಪ್‌, ಕಾಮಿಡಿ ಹೀಗೆ ಎಲ್ಲಾ ಹೂರಣವೂ ಇದೆ. ಚಿತ್ರದಲ್ಲಿ ತಾರಾ, ಅವಿನಾಶ್‌, ರಂಗಾಯಣ ರಘು, ಸಾಧುಕೋಕಿಲ, ಶೋಭರಾಜ್‌ ಇದ್ದಾರೆ. ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದಾಗಿದ್ದು, ಮನುರಂಜನ್‌ ಅವರ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಇಲ್ಲಿ ವಿಭಿನ್ನ ಅಂಶಗಳು ಹೇರಳವಾಗಿವೆ. ಇಲ್ಲಿ ಒಂದು ಕಥೆ ಇದ್ದರೂ,  ಎರಡು ಚಿತ್ರಕಥೆ ಇರಲಿದೆ. ಹೀರೋಗೆ ಇಲ್ಲಿ ಎರಡು ಗೆಟಪ್‌ ಇದೆ. ಇಷ್ಟರಲ್ಲೇ ಆ್ಯಕ್ಷನ್‌ ಲುಕ್‌ ಬಿಡುಗಡೆ ಮಾಡಲಾಗುವುದು. ಮೊದಲ ಹಂತವನ್ನು ಸಕಲೇಶಪುರ ಸುತ್ತುಮುತ್ತ ನಡೆಸುವುದಾಗಿ’ ಹೇಳಿಕೊಂಡರು ಭರತ್‌ ನಾವುಂದ.

ನಿರ್ಮಾಪಕಿ ರಕ್ಷಾ ಅವರು ಭರತ್‌ ಹೇಳಿದ ಕಥೆ ಇಷ್ಟವಾಗಿದ್ದರಿಂದ, ಮನುಗೆ ಈ ಸಿನಿಮಾ ನಿರ್ಮಾಣ
ಮಾಡುತ್ತಿದ್ದಾರಂತೆ. ಮತ್ತೂಬ್ಬ ನಿರ್ಮಾಪಕ ಮೋತಿ ಮಹೇಶ್‌ ಕೂಡ ಹೀರೋ ಮನುರಂಜನ್‌ ಗೆಳೆಯರಂತೆ. ಅವರಿಗೆ ಲವ್‌ಸ್ಟೋರಿ ಇಷ್ಟವಿಲ್ಲವಂತೆ. ಮಾಸ್‌ ಕಥೆ ಇದ್ದರೆ ಮಾಡೋಣ ಅಂದಿದ್ದರಂತೆ. “ಮುಗಿಲ್‌ ಪೇಟೆ’ ಎಲ್ಲವೂ ಹೊಂದಿದ್ದರಿಂದ ಚಿತ್ರ ಮಾಡುತ್ತಿದ್ದಾರಂತೆ. ನಾಯಕಿ ಖಯಾದು ಅವರಿಗೆ ಇದು ಕನ್ನಡದ ಮೊದಲ ಚಿತ್ರ. ಅಸ್ಸಾಂ ಮೂಲದ ಖಯಾದು ಅವರಿಲ್ಲಿ ಬಬ್ಲಿ ಪಾತ್ರ ಮಾಡುತ್ತಿದ್ದಾರೆ. ಸದ್ಯಕ್ಕೆ ಕನ್ನಡ ಭಾಷೆ ಕಲಿಯುತ್ತಿದ್ದು, ಸಿನಿಮಾ ಬಳಿಕ ಕನ್ನಡದಲ್ಲೇ ಮಾತನಾಡುವ ಗುರಿ ಇದೆಯಂತೆ.

Advertisement

ಶ್ರೀಧರ್‌ ವಿ.ಸಂಭ್ರಮ್‌ ಸಂಗೀತ ನೀಡುತ್ತಿದ್ದಾರೆ. ಅವರಿಗೆ ಕಥೆ ಕೇಳಿದ ಕೂಡಲೇ ತಲೆಯಲ್ಲಿ ಇಂತಿಂಥ
ಟ್ಯೂನ್‌ ಕೊಡಬೇಕು ಎಂದೆನಿಸಿತಂತೆ. ಇದೊಂದು ಗುಡ್‌ಫಿಲ್‌ ಸಿನಿಮಾ ಆಗಲಿದ್ದು, ಸಂಗೀತಕ್ಕೂ ಹೆಚ್ಚು
ಜಾಗವಿದೆ’ ಎಂಬುದು ಶ್ರೀಧರ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next