Advertisement

ಬಾಡುತ್ತಿರುವ ಬೆಳೆ ರಕ್ಷಣೆಗೆ ಟ್ಯಾಂಕರ್‌ನಿಂದ ನೀರು

04:27 PM Feb 12, 2020 | Naveen |

ಮುದಗಲ್ಲ: ತೇವಾಂಶ ಕೊರತೆಯಿಂದ ಬಾಡುತ್ತಿರುವ ಬೆಳೆ ರಕ್ಷಣೆಗೆ ರೈತರು ನೀರು ಖರೀದಿಸಿ ಟ್ಯಾಂಕರ್‌ ಮೂಲಕ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಸುರಿದ ಮಳೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಿತ್ತು. ರೈತರು ಬೋರವೆಲ್‌ ನೀರು ನಂಬಿ ತರಕಾರಿ, ತೋಟಗಾರಿಕೆ ಬೆಳೆ ಸೇರಿದಂತೆ ಹಣ್ಣಿನ ಗಿಡಗಳನ್ನು ಬೆಳೆಯಲಾರಂಬಿಸಿದ್ದರು. ಆದರೆ ಕಳೆದ 2-3ತಿಂಗಳಿಂದ ಮಳೆಯಾಗದ ಪರಿಣಾಮ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತಿದೆ. ಬೆಳೆದ ಬೆಳೆಗಳು ಬಾಡುತ್ತಿವೆ. ಇವುಗಳ ರಕ್ಷಣೆಗಾಗಿ ರೈತರು ದೂರದ ಪ್ರದೇಶದಿಂದ ಟ್ಯಾಂಕರ್‌ ಇಲ್ಲವೇ ವಾಹನಗಳಲ್ಲಿ ಟಾಟಾ ಏಸ್‌ ಸರಕು ವಾಹನದಲ್ಲಿ ಸಿಂಟೆಕ್ಸ್‌ ಟ್ಯಾಂಕ್‌ ಇರಿಸಿಕೊಂಡು ಹೋಗಿ ನೀರು ಖರೀದಿಸಿ ತಂದು ಬೆಳೆಗೆ ಹಾಯಿಸುತ್ತಿದ್ದಾರೆ.

Advertisement

ನಾಗಲಾಪುರ ಗ್ರಾಮದ ರೈತ ಆಂಜನೇಯ ಮೂರು ತಿಂಗಳು ಹಿಂದೆ ತನ್ನ ಜಮೀನಿನಲ್ಲಿ ಬದನೆ ಬೆಳೆ ನಾಟಿ ಮಾಡಿದ್ದು, ಈಗ ಕಾಯಿ ಬಿಟ್ಟು ಫಲ ನೀಡುವ ಸಮಯದಲ್ಲಿ ತೇವಾಂಶ ಕಡಿಮೆಯಾಗಿ ಬೆಳೆ ಬಾಡುತ್ತಿದೆ. ದಿನಕ್ಕೆ 10ರಿಂದ 15 ಪುಟ್ಟಿ ಬದನೆಕಾಯಿ ಕಟಾವು ಮಾಡಿ ಮುದಗಲ್ಲ, ತಾವರಗೆರೆ, ಕನಕಗಿರಿ ಪಟ್ಟಣಗಳಿಗೆ ಹೋಗಿ ಮಾರಿ ನಿತ್ಯ 1500 ರೂ.ಗಳಿಂದ 2000 ರೂ. ಆದಾಯ ಪಡೆಯುತ್ತಿದ್ದರು. ಆದರೆ ಕಳೆದ 20ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಬದನೆ ಗಿಡಗಳು ಬಾಡಿ ಫಸಲು ಮಾಯವಾಗುತ್ತಿರುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನೀರು ಖರೀದಿಸಿ ತಂದು ಬೆಳೆಗೆ ಹಾಯಿಸುತ್ತರುವುದಾಗಿ ರೈತ ಆಂಜನೇಯ ತಿಳಿಸಿದ್ದಾರೆ. ಇದರಂತೆ ಯರದೊಡ್ಡಿ, ದೇಸಾಯಿ ಭೋಗಾಪುರ, ವ್ಯಾಕರನಾಳ ರೈತರು ಸಹ ಟ್ಯಾಂಕರ್‌ ನೀರು ಹಾಯಿಸಿ ಬೆಳೆ ರಕ್ಷಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next