Advertisement

ಮುಧೋಳ: ಮುಂದುವರಿದ ಅತಿಕ್ರಮಣ ತೆರವು 

11:35 AM Dec 29, 2018 | |

ಮುಧೋಳ: ರಾಜ್ಯ ಹೆದ್ದಾರಿ ಅಕ್ಕಪಕ್ಕದ ಅತಿಕ್ರಮಣ ತೆರವು ಕಾರ್ಯಾಚರಣೆ ಶುಕ್ರವಾರ ಸಹ ಮುಂದುವರಿಯಿತು. ಶುಕ್ರವಾರ ಸಂತೆ ದಿನವಾಗಿದ್ದರಿಂದ ಸಂಚಾರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಬಸ್‌ ನಿಲ್ದಾಣ ಸಮೀಪದ ಜಡಗಾಬಾಲಾ ಸರ್ಕಲ್‌ದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‌ವರೆಗೆ ಮಾತ್ರ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

Advertisement

ಇತ್ತ ಬಸವೇಶ್ವರ ಸರ್ಕಲ್‌ನಲ್ಲಿ ಮುಧೋಳ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಕೂಡಾ ಮುಂದುವರಿದಿದೆ. ವಾಹನಗಳು ಒಂದರ ಹಿಂದೆ ಒಂದರಂತೆ ನಿರಂತರ ಸಾಗುತ್ತಿದ್ದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು ರಸ್ತೆ ದಾಟಲು ಹರಸಾಹಸ ಪಡಬೇಕಾಯಿತು.

ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ್‌ ಸರ್ಕಲ್‌ ಮುಂಭಾಗದಲ್ಲಿ ನಗರ ಭೂಮಾಪನ ಇಲಾಖೆ, ನಗರಸಭೆ ಹಾಗೂ ಕಂದಾಯ ಇಲಾಖೆಯವರು ರಾಜ್ಯ ಹೆದ್ದಾರಿ ರಸ್ತೆ ಸರ್ವೇ ಕಾರ್ಯ ಕೈಗೊಂಡು ಅತಿಕ್ರಮಣಗೊಂಡಿರುವ ಸ್ಥಳವನ್ನು ಗುರುತಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಈ ಬಗ್ಗೆ ಸುದ್ದಿಗಾರರು ರಸ್ತೆಯ ನಿರ್ದಿಷ್ಟ ಅಳತೆ ಎಷ್ಟು ಎಂಬುದನ್ನು ಪ್ರಶ್ನಿಸಿದಾಗ ಇದಕ್ಕೆ ಯಾವುದೇ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಇದರಿಂದ ನಗರದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ಎಷ್ಟು ಅಳತೆಯದ್ದಾಗಿರಬಹುದೆಂಬ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ತಹಶೀಲ್ದಾರ್‌ ಡಿ.ಜಿ. ಮಹಾತ್‌, ಮುಧೋಳ ನಗರ ಭೂಮಾಪನ ಇಲಾಖೆ ಅಧಿಕಾರಿ ಆರ್‌.ವೈ. ಬಸರಿಗಿಡದ, ಜಮಖಂಡಿ ಭೂಮಾಪನ ಇಲಾಖೆ ಅಧಿಕಾರಿ ಎ.ಜೆ. ಶೇಖ, ಮಹಾಲಿಂಗಪುರ ಭೂಮಾಪನ ಇಲಾಖೆಯ ಅಧಿಕಾರಿ ಎಂ.ಎಂ. ನ್ಯಾಮಗೌಡ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಅಭಿಯಂತರ ಎಂ.ಬಿ. ಹೊಸೂರ ಹಾಗೂ ಸಿಬ್ಬಂದಿ ವರ್ಗದವರು ಸರ್ವೇ ಕಾರ್ಯದ 
ಪಾಲ್ಗೊಂಡಿದ್ದರು.

ಶುಕ್ರವಾರ ಬಾಗಲಕೋಟೆಗೆ ಆಗಮಿಸಿರುವ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಮುಧೋಳ ನಗರ ಹಿತರಕ್ಷಣಾ ಸಮಿತಿಯ 12 ಜನ ಪ್ರಮುಖರು ತೆರಳಿದ್ದಾರೆ. ಆದರೆ ಈ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ  ಎರಡು ದಿನಗಳಿಂದ ನಗರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಪಡುವಂತಾಗಿದೆ. ಹೆಸ್ಕಾಂ ಇಲಾಖೆಯವರು ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸುವ ವೇಳಾಪಟ್ಟಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಶನಿವಾರವೂ ಸಹ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಅನಿರ್ದಿಷ್ಟವಾಧಿ  ಧರಣಿ ಸತ್ಯಾಗ್ರಹ ಕೂಡಾ ಮುಂದುವರೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next