Advertisement

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

01:59 PM May 01, 2024 | Team Udayavani |

ಮೂಡಿಗೆರೆ: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೆಂದು ಗುರುತಿಸಿರುವ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ದಿನಗೂಲಿ ವಾಚರ್ ಆಗಿದ್ದ ಕುಂಡ್ರ ಗ್ರಾಮದ ಸುರೇಶ್ ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ಮಂಗಳವಾರ ಮೂಡಿಗೆರೆ ನ್ಯಾಯಾಲಯದ ಸಮೀಪ ಸುರೇಶ್ ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂಡಿಗೆರೆ ಸಮೀಪದ ಕುಂಡ್ರ ಎಂಬಲ್ಲಿ ಹುಲಿಯೊಂದನ್ನು ಹತ್ಯೆ ಮಾಡಿರುವ ಸಂಬಂಧ ಮೂಡಿಗೆರೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿತ್ತು. ಈ ಪ್ರಕಣರದಲ್ಲಿ ಪ್ರಮುಖ ಆರೋಪಿ ಎನ್ನಲಾಗಿದ್ದ ಸುರೇಶ್ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಅರಣ್ಯ ಇಲಾಖೆ ಹುಡುಕಾಟ ನಡೆಸಿತ್ತು.

ಮಂಗಳವಾರ ಸುರೇಶ್ ಮೂಡಿಗೆರೆ ನ್ಯಾಯಾಲಯಕ್ಕೆ ಶರಣಾಗಲು ಬರುತ್ತಾನೆ ಎಂಬ ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ನ್ಯಾಯಾಲಯದ ಸಮೀಪ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಹರೆ ಹಾಕಿದ್ದರು.

ಮಂಗಳವಾರ ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಸುರೇಶ್ ನನ್ನು ನ್ಯಾಯಾಲಯದ ಸಮೀಪ ವಶಕ್ಕೆ ಪಡೆಯಲಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದು ಮೂಡಿಗೆರೆ ನ್ಯಾಯಾಲಯದಲ್ಲಿ ನ್ಯಾಯಾದೀಶರ ಎದುರು ಹಾಜರುಪಡಿಸಿದ್ದು, ನ್ಯಾಯಾದೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಇದರೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಬಂಧನವಾದಂತಾಗಿದೆ. ಈಗಾಗಲೇ ಬಂಧಿಸಲ್ಪಟ್ಟಿದ್ದ ಐವರು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ.

ಈ ಪ್ರಕರಣದ ಆರೋಪಿಯೊಬ್ಬ ಹುಲಿ ಹತ್ಯೆಯ ಬಗ್ಗೆ ಎಳೆ ಎಳೆಯಾಗಿ ಮಾತನಾಡಿರುವ ವಿಡಿಯೋ ಒಂದು ರೆಕಾರ್ಡ್ ಆಗಿದ್ದು ಅದರಲ್ಲಿ ಕುಂಡ್ರ ಸುರೇಶ್ ಎಂಬಾತನೇ ಹುಲಿಯನ್ನು ಬಂದೂಕಿನಿಂದ ಹೊಡೆದಿದ್ದಾನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಅಲ್ಲದೇ ಪ್ರಕರಣದ ಒಂದನೇ ಆರೋಪಿಯೆಂದು ಬಂಧಿತರಾಗಿರುವ ಸತೀಶ್ ಬೈಕಿನಲ್ಲಿ ಹುಲಿಯ ಅಂಗಾಂಗಗಳನ್ನು ಇಟ್ಟು ಅವರನ್ನು ಪ್ರಕರಣದಲ್ಲಿ ಸಿಲುಕಿಸಿರುವ ಬಗ್ಗೆಯೂ ಆತ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಈ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next