Advertisement

ಮೂಡಿಗೆರೆ ಕಲಹ ದೆಹಲಿ ತಲುಪಿದ್ದೇಕೆ?

04:41 PM Apr 05, 2023 | Team Udayavani |

ಚಿಕ್ಕಮಗಳೂರು:ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ನಾಯಕರು ಅಭ್ಯರ್ಥಿಗಳ ಆಯ್ಕೆಯಲ್ಲಿ ಮಗ್ನರಾಗಿದ್ದರೆ ಕೆಲ ಕ್ಷೇತ್ರದಲ್ಲಿ ಟಿಕೆಟ್‌ ನಿರೀಕ್ಷೆಯಲ್ಲಿರುವವರ ವಿರುದ್ಧ ವಿರೋಧಾಭಾಸವೂ ವ್ಯಕ್ತವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದಲ್ಲೂ ಬಿಜೆಪಿ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡದಂತೆ ಪಕ್ಷದ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Advertisement

ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್‌ ನೀಡಬಾರದು ಎಂಬ ಕೂಗು ಅನಿರೀಕ್ಷಿತವೇನಲ್ಲ. ಕಳೆದೊಂದು ವರ್ಷದಿಂದ ಪಕ್ಷದೊಳಗೆ ಕೇಳಿ ಬರುತ್ತಿತ್ತು. 6 ತಿಂಗಳಿಂದ ಈಚೆಗೆ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ ಇನ್ನಷ್ಟು ಜಾಸ್ತಿಯಾಗಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ವಿರೋಧದ ಕೂಗು ತೀವ್ರತೆ ಪಡೆದುಕೊಂಡಿದೆ. ಇದು ಬಿಜೆಪಿ ನಾಯಕರಿಗೆ ತಲೆನೋವಾಗಿ ಕಾಡುತ್ತಿದೆ.

ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡಬಾರದು ಎಂದು ಒಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ಗುಂಪು ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸುತ್ತಿದೆ. ಇತ್ತೀಚೆಗೆ ಬಿಜೆಪಿಯಿಂದ ಮೂಡಿಗೆರೆಯಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಎದುರೇ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮುಸಿನಿಕೊಂಡ ಯಡಿಯೂರಪ್ಪ ಅವರು ಕಾರ್ಯಕ್ರಮ ಮೊಟಕುಗೊಳಿಸಿ ನಡೆದಿದ್ದರು.

ಅದೇ ವಿರೋಧಿ ಗುಂಪು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿವಾಸದ ಮುಂದೆ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್‌ ನೀಡಬಾರದು, ಹೊಸ ಮುಖಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು. ಇದಾಗಿ ಕೆಲ ದಿನಗಳ ಬಳಿಕ ಶಾಸಕರ ಪರ ಇರುವ ಗುಂಪು ಎಂ.ಪಿ. ಕುಮಾರಸ್ವಾಮಿಗೇ ಟಿಕೆಟ್‌ ನೀಡಿ ಮೂಡಿಗೆರೆ ಕ್ಷೇತ್ರ ಉಳಿಸಬೇಕೆಂದು ಸಿ.ಟಿ.ರವಿ ಮನೆ ಮುಂದೆ ಜಮಾಯಿಸಿ ಆಗ್ರಹಿಸಿತ್ತು.

ಇದಲ್ಲದೇ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್‌ ನೀಡಬಾರದು ಎಂದು ಒಂದು ಹೆಜ್ಜೆ ಮುಂದೆ ಹೋಗಿರುವ ವಿರೋಧಿ ಗುಂಪು ಈ ಕುರಿತು ಪ್ರಧಾನಿ ಮೋದಿ, ಅಮಿತ್‌ ಶಾ, ಬಿ.ಎಲ್‌.ಸಂತೋಷ್‌, ಜೆ.ಪಿ.ನಡ್ಡಾ, ಶೋಭಾ ಕರಂದ್ಲಾಜೆಗೆ ಪತ್ರ ಬರೆದಿದೆ. ಒಟ್ಟಾರೆ ಕ್ಷೇತ್ರದಲ್ಲಿನ ಕಾರ್ಯಕರ್ತರಿಂದ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Advertisement

ಟಿಕೆಟ್‌ ಬೇಡ ಎನ್ನಲು ಕಾರಣ ಏನು?:
ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್‌ ನೀಡಬಾರದು ಎಂಬ ಮುಸುಕಿನ ಗುದ್ದಾಟ ಈಗ ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ಅನೇಕ ಕಾರಣಗಳನ್ನು ಕಾರ್ಯಕರ್ತರು ಜನರ ಮುಂದಿಟ್ಟಿದ್ದಾರೆ. ಶಾಸಕ ಎಂ.ಪಿ. ಕುಮಾರಸ್ವಾಮಿ ಕಳೆದ ಐದು ವರ್ಷ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಅವರು ಕಾರ್ಯಕರ್ತರ ಕೈಗೆ ಸಿಗುತ್ತಿರಲಿಲ್ಲ. ಕಷ್ಟಕಾಲದಲ್ಲಿ ಅವರನ್ನು ಸಂಪರ್ಕಿಸಲು ಯತ್ನಿಸಿದರೆ ಅವರು ತಮ್ಮ ಮೊಬೈಲ್‌ ರಿಸೀವ್‌ ಮಾಡುತ್ತಿರಲಿಲ್ಲ. ಪಕ್ಷದ ಕಾರ್ಯಕರ್ತರಿಗಿಂತ ಬೇರೆ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದರು. ಇನ್ನು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೂ ಆಸಕ್ತಿ ತೋರಲಿಲ್ಲ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಕಾರ್ಯಕರ್ತರು ಬಹಿರಂಗವಾಗಿಯೇ ಆರೋಪಿಸುತ್ತಿದ್ದಾರೆ.

ಕಾಮಗಾರಿ ಗುತ್ತಿಗೆ ವಿಚಾರದಲ್ಲಿ ಅವರ ಹಿಂಬಾಲಕರಿಗೆ ಹೊರತುಪಡಿಸಿ ಬೇರೆಯವರಿಗೆ ಗುತ್ತಿಗೆ ನೀಡದೆ ನಿರ್ಲಕ್ಷé ವಹಿಸಿದ್ದಾರೆ. ಆಪ್ತರ ಒಂದು ಗುಂಪಿಗೆ ಮಾತ್ರ ನೆರವಾಗುತ್ತಿದ್ದರು. ಉಳಿದಂತೆ ಪಕ್ಷನಿಷ್ಠ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ. ವಿಧಾನ ಪರಿಷತ್‌ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ  ಚಟುವಟಿಕೆ ನಡೆಸಿದ್ದಲ್ಲದೆ ಆಪ್ತ ವಲಯದಲ್ಲಿ ಗುರುತಿಸಿಕೊಂಡವರನ್ನು ಆ ಸಂದರ್ಭದಲ್ಲಿ ಜವಾಬ್ದಾರಿಯಿಂದ ತೆಗೆದಿದ್ದಾರೆ. ಅತಿವೃಷ್ಟಿ ಪರಿಹಾರ ಸಂಬಂಧ ವಿಧಾನಸೌಧ ಗಾಂಧಿ  ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ತಮ್ಮ ಸರ್ಕಾರದ ವಿರುದ್ಧವೇ ತಿರುಗಿ ಬೀಳುವ ಮೂಲಕ ಪಕ್ಷ ಮತ್ತು ಸರ್ಕಾರದ ಮರ್ಯಾದೆಗೆ ಧಕ್ಕೆ ತಂದಿದ್ದಾರೆ.

ಕಾಡಾನೆ ದಾಳಿಯಿಂದ ಕುಂದೂರು ಗ್ರಾಮದ ಆಶಾ ಎಂಬುವರು ಮೃತಪಟ್ಟಿದ್ದು, ಈ ವೇಳೆ ಶಾಸಕರ ಹತ್ತಿರ ಅಳಲು ತೋಡಿಕೊಳ್ಳಲು ಮುಂದಾದವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಶಾಸಕರೊಬ್ಬರು ಬಟ್ಟೆ ಹರಿದುಕೊಂಡು ದೊಡ್ಡ ಡ್ರಾಮಾ ಮಾಡಿದ್ದಾರೆ. ತಮ್ಮ ಪಕ್ಷದ ಮಹಿಳಾ ಕಾರ್ಯಕರ್ತರು ನೆರವು ಕೇಳಿಕೊಂಡು ಬಂದ ಸಂದರ್ಭದಲ್ಲಿ ಅವರನ್ನು ಅಗೌರವದಿಂದ ಕಂಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿಲ್ಲ. ಅಭಿವೃದ್ಧಿ ಕಾಮಗಾರಿ ಕಮಿಷನ್‌ ದಂಧೆ, ತಮ್ಮ ವರ್ತನೆ ಬದಲಾಯಿಸಿಕೊಳ್ಳದಿರುವುದು, ಪ್ರಬಲ ಒಕ್ಕಲಿಗ ಸಮುದಾಯದೊಂದಿಗೆ ಹೊಂದಾಣಿಕೆ ಇಲ್ಲದಿರುವುದು ಈ ಎಲ್ಲಾ ಕಾರಣಗಳಿಂದ ಸ್ವಪಕ್ಷೀಯ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಹಾಗಾದರೆ ಬೇರೆ ಆಯ್ಕೆ ಯಾರು?
ಬಿ.ಎಸ್‌.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಂ.ಪಿ. ಕುಮಾರಸ್ವಾಮಿ ಮೂಡಿಗೆರೆ ಟಿಕೆಟ್‌ ತಮಗೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದು ಕಡೆ ಇವರಿಗೆ ಟಿಕೆಟ್‌ ನೀಡಬಾರದೆಂದು ವಿರೋಧ ವ್ಯಕ್ತವಾಗುತ್ತಿದ್ದಂತೆ ಮೂಡಿಗೆರೆ ಕ್ಷೇತ್ರಕ್ಕೆ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದ್ದು, ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳ ನರೇಂದ್ರ, ಜಿಲ್ಲೆಯವರಾದ ದೀಪಕ್‌ ದೊಡ್ಡಯ್ಯ, ವಿಜಯಕುಮಾರ್‌, ಕೋಲಾರ ಮಳವಳ್ಳಿ ವಿಭಾ, ಬಿದರಹಳ್ಳಿ ಜಯಪಾಲ್‌ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದು, ಬಿಜೆಪಿ ನಾಯಕರು ಯಾರಿಗೆ ಮಣೆ ಹಾಕುತ್ತಾರೆಂಬ ಕುತೂಹಲ ಗರಿಗೆದರಿದೆ.

– ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next