Advertisement

ಮುಚ್ಚುವ ಸ್ಥಿತಿಯಲ್ಲಿ  ಮುದ್ದೂರು ಶ್ರೀ ಗಣಪತಿ ಅ.ಹಿ.ಪ್ರಾ. ಶಾಲೆ  

06:15 AM Jun 04, 2018 | |

ಬ್ರಹ್ಮಾವರ: ಸಹಸ್ರಾರು ವಿದ್ಯಾರ್ಥಿಗಳಿಗೆ ಬೆಳಕನ್ನು ನೀಡಿದ ಸಂಸ್ಥೆ. 71 ವರ್ಷಗಳ ಸುದೀರ್ಘ‌ ಪಯಣ. ಆದರೆ ಇಂದು ಬಹುತೇಕ ಮುಚ್ಚುವ ಸ್ಥಿತಿ. ಇದು ನಾಲ್ಕೂರು ಗ್ರಾಮದ ಮುದ್ದೂರು ಶ್ರೀ ಗಣಪತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ.

Advertisement

ಓರ್ವ ಶಿಕ್ಷಕ, ಬೆರಳೆಣಿಕೆ ಮಕ್ಕಳಿರುವುದರಿಂದ ಅಪ್ಪು ಮಾಸ್ತರ್‌ ಶಾಲೆ ಎಂದೇ ಪ್ರಸಿದ್ಧವಾದ ಮುದ್ದೂರು ಶಾಲೆ ಅವನತಿಯ ಅಂಚಿನಲ್ಲಿದೆ.

ಪ್ರಸ್ತುತ ಓರ್ವ ಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದು, ಕಳೆದ  ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ 1ರಿಂದ 7ನೇ ತರಗತಿ ತನಕ 40ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಆದರೆ ಕೇವಲ ಓರ್ವ ಶಿಕ್ಷಕರಿದ್ದುದರಿಂದ ಹೆತ್ತವರು ತಮ್ಮ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ದೂರದ ಊರುಗಳಾದ ಮಿಯಾರು, ಕಜೆ, ನುಕ್ಕೂರು ಮುಂತಾದ ಕಡೆ ಶಾಲೆಗಳಿಗೆ ಸೇರ್ಪಡಿಸಿದ್ದಾರೆ.ಈ ಬಾರಿಯೂ 15 ಮಕ್ಕಳು ಇದ್ದು, ಓರ್ವ ಶಿಕ್ಷಕನಿಂದ ಮುನ್ನಡೆಸಲು ಸಾಧ್ಯವಾಗದ ಕಾರಣ ಈ ಪರಿಸ್ಥಿತಿ ಎದುರಾಗಿದೆ.

1947ರಲ್ಲಿ ಕೇವಲ 22 ಮಕ್ಕಳಿಂದ ಮುದ್ದೂರು ಶಾಲೆ ಪ್ರಾರಂಭವಾಯಿತು. 1985ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡಿತು. ಈ ಶಾಲೆಯ ಸ್ಥಾಪಕರು ಐ. ಕೃಷ್ಣ ಕಾರಂತರು. ಸುತ್ತ ಮುತ್ತಲಿನ ಊರುಗಳಲ್ಲಿ ಬೇರೆ ಶಾಲೆ ಇಲ್ಲದೆ ಇರುವುದರಿಂದ ತಮ್ಮ ಖಾಸಗಿ ಜಾಗದಲ್ಲಿ ಶಾಲೆ ಪ್ರಾರಂಭಿಸಿದ್ದರು.
 
ಸರಕಾರಿ ಕೆಲಸಗಳ ಕೇಂದ್ರಬಿಂದು
ಈ ಶಾಲೆಯು ಪಂಚಾಯತ್‌ ಕಚೇರಿ, ಪಂಚಾಯತ್‌ ಕೋರ್ಟ್‌, ಮತದಾನ ಕೇಂದ್ರ ಮುಂತಾದ ಸರಕಾರಿ ಕೆಲಸಗಳಿಗೆ ಕೇಂದ್ರ ಬಿಂದುವಾಗಿತ್ತು. ಸರಕಾರಿ ಅಧಿಕಾರಿಗಳು ಕಾರ್ಯ ನಿಮಿತ್ತ ಇಲ್ಲಿ ವಾಸ್ತವ್ಯ ಹೂಡಿದ ನಿದರ್ಶನಗಳೂ ಇದೆ.

ಸಾಂಸ್ಕೃತಿಕ ಕೇಂದ್ರ
ಈ ಶಾಲೆ ಸಾಂಸ್ಕೃತಿಕವಾಗಿಯೂ ಕೂಡ ಸಂಪದ್ಭರಿತವಾಗಿತ್ತು. ಕರಾವಳಿಯ ಗಂಡು ಕಲೆಯಾದ ಯಕ್ಷಗಾನವನ್ನು ಕೇವಲ ಗಂಡು ಮಕ್ಕಳಿಗಷ್ಟೇ ಸೀಮಿತವಲ್ಲ. ಹೆಣ್ಣು ಮಕ್ಕಳಿಗೂ ಕೂಡ ಯಕ್ಷಗಾನದ  ಧೀಂ ತಕಿಟ ಕಲಿಸಿ ಹೊರ ಜಗತ್ತಿಗೆ ಪರಿಚಯಿಸಿದ ಹೆಗ್ಗಳಿಕೆ ಈ ಶಾಲೆಯದ್ದು. ಈ ಶಾಲೆಯ ಆವಾಗಿನ ಶಿಕ್ಷಕರೆಲ್ಲರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರು. ಕ್ರೀಡೆಯಲ್ಲೂ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ತಲುಪಿದ್ದರು. ಅವರು ತಮ್ಮ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಮಾತ್ರವಲ್ಲದೆ ಇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೇರೇಪಿಸಿ ತಮ್ಮ ವಿದ್ಯೆಯನ್ನು ಧಾರೆ ಎರೆದಿದ್ದರು. ಇದರ ಫಲವಾಗಿ ಇಂದು ಆ ವಿದ್ಯಾರ್ಥಿಗಳೆಲ್ಲರೂ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದ್ದಾರೆ.

Advertisement

ಎಲ್ಲ ಕ್ಷೇತ್ರಗಳಲ್ಲೂ ಸಾಧನೆ
ಶಾಲಾ ಹಳೆ ವಿದ್ಯಾ ರ್ಥಿಗಳು ದೇಶ, ವಿದೇಶಗಳಲ್ಲಿ ಉನ್ನತ ನೌಕರಿಯಲ್ಲಿದ್ದಾರೆ.  ಐ.ಟಿ., ಬಿ.ಟಿ .ಕಂಪೆನಿಗಳಲ್ಲಿ, ಶಿಕ್ಷಕ ವೃತ್ತಿ, ವೈದ್ಯಕೀಯ, ಉದ್ಯಮಿಗಳು, ಕೃಷಿಕರು, ಆರಕ್ಷಕರೂ, ರಾಜಕಾರಣಿಗಳು, ಸೈನಿಕ ವೃತ್ತಿ, ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿದ್ದಾರೆ. ಕಲಿತ ಶಾಲೆಯಂತೆ ತಾವು ಕೂಡ ಶಾಲೆ ಪ್ರಾರಂಭಿಸಿದ ಸಾಧಕರೂ ಇದ್ದಾರೆ.

ಈ ಶಾಲೆಯಲ್ಲಿ ಕಲಿಯುತ್ತಿರುವ ಇಂದಿನ ವಿದ್ಯಾರ್ಥಿಗಳ ಭವಿಷ್ಯದಿಂದ  ದೃಷ್ಟಿಯಿಂದ ಹಳೆಯವಿದ್ಯಾರ್ಥಿಗಳು, ಉದ್ಯಮಿ ಹಾಗೂ ದಾನಿಗಳ ನೆರವಿನಿಂದ ಗೌರವ ಶಿಕ್ಷಕಿಯರನ್ನು ನೇಮಿಸಿ ಶಾಲಾ ಚಟುವಟಿಕೆ ಮುಂದುವರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಸೂಕ್ತ ವ್ಯವಸ್ಥೆ ಅಗತ್ಯ
ಇಂದು ಸರಕಾರ ನೀಡುತ್ತಿರುವ ಹಲವು ಭಾಗ್ಯಗಳು ಅನುದಾನಿತ ಶಾಲೆಗಳಿಗೆ ಸಿಗುತ್ತಿಲ್ಲ. ಸರಕಾರದ ಶಿಕ್ಷಣ ಪದ್ಧತಿಯ ಪ್ರಕಾರ 30ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ. ಶಾಲೆಯ ವಿವಿಧ ಕಾರ್ಯ ನಿಮಿತ್ತ ಶಿಕ್ಷಕರು ತೆರಳಿದರೆ ಆ ದಿವಸ ವಿದ್ಯಾರ್ಥಿಗಳನ್ನು ಕೇಳುವವರಿಲ್ಲ. ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಿದ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೂಕ್ತ ವ್ಯವಸ್ಥೆಗಳನ್ನು ನೀಡಬೇಕಿದೆ.

ಪ್ರಯತ್ನ ನಡೆಯುತ್ತಿದೆ
ಈ ಅನುದಾನಿತ ಶಾಲೆಯನ್ನು ಕನಿಷ್ಠ 4-5 ವರ್ಷಗಳ ಮಟ್ಟಿಗೆ ಸರಕಾರಕ್ಕೆ ಲೀಸ್‌ಗೆ ಬಿಟ್ಟು ಕೊಟ್ಟಾಗ ಇನ್ನಷ್ಟು ಸೌಲಭ್ಯ ಕಲ್ಪಿಸಿ ಮುನ್ನಡೆಸಲು ಸಾಧ್ಯ. ಅಲ್ಲದೆ ನಾಲ್ಕೂರು ಪ್ರೌಢ ಶಾಲೆಯಲ್ಲಿ  ತರಗತಿ ಕೋಣೆಗಳು ಖಾಲಿ ಇದ್ದು, ಅಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.
– ಪ್ರತಾಪ್‌ ಹೆಗ್ಡೆ ,ಜಿ.ಪಂ. ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next