Advertisement

ಮುಧೋಳ: ನಾಳೆ ಸಂಸ್ಕೃತಿ ಸಂಭ್ರಮ

04:59 PM Oct 20, 2018 | |

ಮುಧೋಳ: ಅಳಿಸಿ ಹೋಗುತ್ತಿರುವ ಸಂಪ್ರದಾಯಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಇಡೀ ವರ್ಷದಲ್ಲಿ ಆಚರಣೆಯಾಗುವ ಎಲ್ಲ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಣೆ ಮಾಡುವ ಸಂಸ್ಕೃತಿ ಸಂಭ್ರಮ-2018 ಕಾರ್ಯಕ್ರಮವನ್ನು ಅ.21ರಂದು ದಾನಮ್ಮದೇವಿ ದೇವಾಲಯದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಪ್ತಸ್ವರ, ಸಂಗೀತ, ನೃತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ ಹೇಳಿದರು.

Advertisement

ಕಾನಿಪ ಕಾರ್ಯಾಲಯದಲ್ಲಿ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಮುಧೋಳ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದಿಂದ ಒಟ್ಟು 19 ಸಮುದಾಯದ ಎಲ್ಲ ದೇವರ ಪೂಜೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಶ್ರಾವಣ, ಗುಳ್ಳವ್ವ, ಗಣೇಶ ಚತುರ್ಥಿ, ರಕ್ಷಾಬಂಧನ, ಸರಸ್ವತಿ ಪೂಜೆ, ನಾಗರ ಪಂಚಮಿ, ಶುಕ್ರಗೌರಿ ಪೂಜೆ, ಗೌರವ್ವ-ಶಿಗವ್ವ ಆಚರಣೆ, ನವರಾತ್ರಿ, ಆಯುಧ ಪೂಜೆ, ವಿಜಯದಶಮಿ, ದೀಪಾವಳಿ, ಬಲಿಪಾಡ್ಯ, ಯುಗಾದಿ, ಸಂಕ್ರಾಂತಿ ಹೀಗೆ ವರ್ಷದಲ್ಲಿ ಬರುವ ಎಲ್ಲ ಸಂಪ್ರದಾಯಗಳ ಆಚರಣೆಯನ್ನು ಒಂದೇ ವೇದಿಕೆಯಲ್ಲಿ ಎಲ್ಲ ಸಮುದಾಯದ ಮಹಿಳೆಯರಿಂದ ಆಚರಣೆ ಮಾಡಲಾಗುವುದು. ಗ್ರಾಮೀಣ ಕ್ರೀಡೆಗಳಾದ ಜೋಕಾಲಿ, ಬುಗುರಿ, ಕೊಬ್ಬರಿ ಚಕ್ರ, ಸಕ್ಕ-ಸರಗಿ ಸೇರಿದಂತೆ ಇತರೆ ಗ್ರಾಮೀಣ ಆಟಗಳು ಹಾಗೂ ಗೀಗಿ ಪದ, ಶೋಭಾನೆ ಪದ, ಜೋಗುಳ ಪದ, ಚೌಡಕಿ ಪದ, ಹಂತಿ ಪದ, ಕರ್ಬಲ್‌ ಸೇರಿದಂತೆ ವಿವಿಧ ಗ್ರಾಮೀಣ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತದೆ ಎಂದು ಹೇಳಿದರು.

ಭಾರತಿ ಕತ್ತಿ ಮಾತನಾಡಿ, ಕಾರ್ಯಕ್ರಮಕ್ಕೆ ವಿಜಯಪುರದ ಆಶಾ.ಎಂ. ಪಾಟೀಲ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ಚಂದನ ಟಿವಿಯ ನಿರ್ಮಲಾ ಎಲಿಗಾರ, ಊರ್ಮಿಳಾ ಕಳಸದ, ಚಿತ್ರನಟಿ ಮಾಳವಿಕಾ, ದಾಕ್ಷಾಯಣಿ ನಿರಾಣಿ, ಶಾಂತಾಬಾಯಿ ಕಾರಜೋಳ, ಶಶಿಕಲಾ ಹುಡೇದ, ಶಶಿಕಲಾ ತಿಮ್ಮಾಪುರ, ವೀಣಾ ಕಾಶಪ್ಪನವರ, ಗಂಗೂಬಾಯಿ ಮಾನಕರ ಸೇರಿದಂತೆ ವಿವಿಧ ಗಣ್ಯರು ಆಗಮಿಸುವರು ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕಿ ನಿರ್ಮಲಾ ಮಲಘಾಣ ಮಾತನಾಡಿ, ಗ್ರಾಮೀಣ ಪ್ರದೇಶದ ಕುಟ್ಟುವ, ಬೀಸುವ, ಜೋಗುಳು ಹಾಡುವ ಪದ್ಧತಿಯಲ್ಲಿ ಉತ್ತರ ಕರ್ನಾಟಕದ ದೇಶಿಯ ಉಡುಗೆಯಲ್ಲಿ ಬರುವ ಮಹಿಳೆಯರಿಗೆ ಮಾತ್ರವಾಗಿದ್ದು, ನಮ್ಮ ಉದ್ದೇಶ ನಗರದಲ್ಲಿ ಕ್ರಮೇಣ ನಶಿಸಿ ಹೋಗುತ್ತಿರುವ ಸಂಪ್ರದಾಯ ಪದ್ಧತಿ, ಆಚರಣೆಗಳನ್ನು ಉಳಿಸಿ-ಬೆಳೆಸುವುದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮದ ಸುತ್ತಲಿನ ಮಹಿಳೆಯರು ಇಳಕಲ್‌ ಸೀರೆಯ ಉಡುಗೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕು. ಇದಕ್ಕೂ ಮುಂಚೆ ರನ್ನ ಸರ್ಕಲ್‌ದಿಂದ ದಾನಮ್ಮದೇವಿ ದೇವಾಲಯದವರೆಗೆ ಮಹಿಳೆಯರ ಕುಂಭಾರತಿ ಮೆರವಣಿಗೆ ನಡೆಯುವುದು ಎಂದು ಹೇಳಿದರು. ಸಪ್ತಸ್ವರ ಸಂಗೀತ, ನೃತ್ಯ ಸಂಸ್ಥೆಯ ಭಾರತಿ ಮಲಘಾಣ, ಶ್ರೀದೇವಿ ಅಂಗಡಿ, ಸವಿತಾ ಅಂಗಡಿ, ಭಾರತಿ ಕತ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next