ಮುಧೋಳ: ಒಂದೆಡೆ ಬರಗಾಲ, ಮತ್ತೂಂದೆಡೆ ಅತೀವ ನೀರಿನ ಅಭಾವ. ಇವುಗಳ ಮಧ್ಯೆ ಬದುಕು ಸಾಗಿಸಲು ಹೆಣಗುತ್ತಿರುವ ಅನ್ನದಾತನಿಗೆ ಇದೀಗ ಪಂಪ್‌ಸೆಟ್ ಕಳ್ಳರ ಹಾವಳಿ ನೆಮ್ಮದಿಗೆ ಕಲ್ಲುಹಾಕಿದೆ.
Advertisement
ಕಳೆದ 7-8 ತಿಂಗಳಿನಲ್ಲಿ ತಾಲೂಕಿನ ಜಂಬಗಿ ಕೆ.ಡಿ. ಗ್ರಾಮವೊಂದರಲ್ಲಿಯೇ ಸರಿ ಸುಮಾರು 9 ಪಂಪ್‌ಸೆಟ್ ಕದ್ಯೊಯ್ದಿರುವ ಕಳ್ಳರು ಅನ್ನದಾತರ ಜಂಘಾಬಲವೇ ಕುಸಿಯುವಂತೆ ಮಾಡುತ್ತಿದ್ದಾರೆ.
ಅರಕೇರಿ-1, ಗೋವಿಂದ ಜಠಾಣಿ-1 ಹಾಗೂ ತಿಮ್ಮಾಪುರ ಗ್ರಾಮದಲ್ಲಿ 2 ಪಂಪ್‌ಸೆಟ್ ಹಾಗೂ ಮುದ್ದಾಪುರದಲ್ಲಿ ಸಾವಿರಾರು ರೂ. ಮೌಲ್ಯದ ಕೇಬಲ್ ಕಳ್ಳತವಾಗಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ. ರಾತ್ರಿವೇಳೆ ಕೈಚಳಕ: ತಾಲೂಕಿನಲ್ಲಿ ಹಾದು ಹೋಗಿರುವ ಘಟಪ್ರಭಾ ನದಿಯಲ್ಲಿ ನೀರಾವರಿ ಉದ್ದೇಶಕ್ಕೆ ನೂರಾರು ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ಇಂತಹ ಪಂಪ್‌ಸೆಟ್‌ಗಳನ್ನು ಗುರುತಿಸುವ ಕಳ್ಳರು ರಾತ್ರಿವೇಳೆ ನದಿ ದಡಕ್ಕೆ ತೆರಳಿ ಪಂಪ್‌ಸೆಟ್‌ಗಳನ್ನು ಕದ್ದೊಯ್ಯುತ್ತಾರೆ. ಇದರಿಂದ ರೈತರಿಗೆ ಕಳ್ಳರನ್ನು ಹಿಡಿಯುವುದು ಸಾಧ್ಯವಾಗುತ್ತಿಲ್ಲ.
Related Articles
ಬೇಸಿಗೆ ಹಾಗೂ ಮಳೆಯ ಕೊರತೆಯಿಂದ ನದಿಯಲ್ಲಿನ ನೀರು ಸಂಪೂರ್ಣವಾಗಿ ಬತ್ತಿದೆ. ಇದು ಕಳ್ಳತನಕ್ಕೆ ವರದಾನವಾಗಿದೆ. ನೀರು ಇರದ ಕಾರಣ ನದಿ ತೀರಕ್ಕೆ ಬೈಕ್ ಮೇಲೆ ತೆರಳಲು ಅನುಕೂಲವಾಗುತ್ತದೆ. ಅದೇ ಕಾರಣಕ್ಕೆ ಕಳ್ಳರು ಮಿಂಚಿನ ವೇಗದಲ್ಲಿ ಪಂಪ್‌ಸೆಟ್ ಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ರೈತರು ಮಾಹಿತಿ ನೀಡುತ್ತಾರೆ. ತಾಲೂಕಿನ ಜಂಬಗಿ ಕೆ.ಡಿ., ಮುದ್ದಾಪುರ, ತಿಮ್ಮಾಪುರ ಸೇರಿದಂತೆ ಹಲವಾರು ಭಾಗದಲ್ಲಿ ಪಂಪ್‌ಸೆಟ್‌ಗಳು ಹೆಚ್ಚು ಕಳ್ಳತನವಾಗುತ್ತಿವೆ. ಆದರೆ ಕಳ್ಳರು ಮಾತ್ರ ಕೈಗೆ ಸಿಗುತ್ತಿಲ್ಲ. ಆದಷ್ಟು ಶೀಘ್ರ ಕಳ್ಳರನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟಬೇಕು ಎಂಬುದು ನದಿತೀರದ ಗ್ರಾಮದ ರೈತರ ಆಗ್ರಹವಾಗಿದೆ.
Advertisement
ಅರ್ಧ ಬೆಲೆಗೆ ಮಾರಾಟ: ಕಳ್ಳರ ರೈತರ ಪಂಪ್‌ಸೆಟ್ ಗಳನ್ನು ಕದ್ದು ದೂರದ ಊರಿನಲ್ಲಿ ಅರ್ಧಬೆಲೆಗೆ ಮಾರಾಟ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗೆ ಮಾರಾಟವಾಗುವ ಮೋಟಾರ್ ಗಳು ಮತ್ತೆ ರೈತರ ಕೈ ಸೇರುವುದು ಕನಸಿನ ಮಾತೇ ಸರಿ.
ಪಂಪ್‌ಸೆಟ್ ಜೊತೆಗೆ ಕೇಬಲ್‌ಗೂ ಕನ್ನ:ಇನ್ನೂ ಪಂಪ್‌ಸೆಟ್ ಕಳ್ಳತನಕ್ಕೆ ಮುಂದಾಗುವ ಕಳ್ಳರು ಪಂಪ್‌ಸೆಟ್‌ನೊಂದಿಗೆ ನದಿ ದಂಡೆಯಲ್ಲಿರುವ ಕೇಬಲ್‌ನ್ನು ಕದಿಯುತ್ತಿದ್ದಾರೆ. ಸಾವಿರಾರು ಮೌಲ್ಯದ ಕೇಬಲ್‌ನ್ನು ಕದಿಯುವ ಖದೀಮರು ರೈತರ ಆರ್ಥಿಕ ಜೀವನದೊಂದಿಗೆ
ಚೆಲ್ಲಾಟವಾಡುತ್ತಿದ್ದಾರೆ. ಪ್ರಯೋಜನವಾಗದ ದೂರು: ಸಾವಿರಾರು ರೂ. ವ್ಯಯಿಸಿ ಮೋಟಾರ್ ಅಳವಡಿಸಿರುವ ರೈತರು ಅವುಗಳು ಕಳ್ಳತನವಾದಾಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮೋಟಾರ್ ಕಳ್ಳತನವಾದಗೆಲ್ಲ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ದೂರು ನೀಡಿದಾಗ ಸ್ಥಳ ಮಹಜರು ಮಾಡುವ ಪೊಲೀಸರು ಕಳ್ಳರ ಹೆಡೆಮುರಿಕಟ್ಟಲು ಮಾತ್ರ ಮುಂದಾಗುತ್ತಿಲ್ಲ ಎಂಬುದು ರೈತರ ಅಳಲಾಗಿದೆ. ಇನ್ನಾದರೂ ಖದೀಮರನ್ನು ಸೆರೆಹಿಡಿದು ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಪ್ರಜ್ಞಾವಂತ ರೈತರ ಒತ್ತಾಯವಾಗಿದೆ. ನದಿತೀರದ ಗ್ರಾಮದಲ್ಲಿ ಪಂಪ್‌ಸೆಟ್‌ಗಳು ಕಳ್ಳತನವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ
ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಂಪ್‌ಸೆಟ್ ಗಳು ಕಳ್ಳತನವಾಗುವುದರ ಬಗ್ಗೆ ಅಧಿಕೃತವಾಗಿ ದೂರು ದಾಖಲಾಗಿಲ್ಲ. ಆದರೂ ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಕಳ್ಳರನ್ನು ಹೆಡೆಮುರಿ ಕಟ್ಟಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಶಾಂತವೀರ ಈ., ಡಿವೈಎಸ್‌ಪಿ ಜಮಖಂಡಿ ನಮ್ಮ ಹಳ್ಳಿಯೊಂದರಲ್ಲೇ ಸರಿಸುಮಾರು 9 ಪಂಪ್‌ಸೆಟ್‌ಗಳು ಕಳ್ಳತನವಾಗಿವೆ. ಸಾಲ ಮಾಡಿ ಪಂಪ್‌ಸೆಟ್ ಅಳವಡಿಸಿದ್ದು ಕಳ್ಳರ
ಪಾಲಾಗುತ್ತಿವೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ಕಳ್ಳರ ಹೆಡೆಮುರಿ ಕಟ್ಟಿ
ರೈತರಿಗೆ ಅನುಕೂಲ ಮಾಡಿಕೊಡಬೇಕು.
*ಗೋವಿಂದ ಜಠಾಣಿ,
ಪ್ರಗತಿಪರ ರೈತರು ಜಂಬಗಿ *ಗೋವಿಂದಪ್ಪ ತಳವಾರ