Advertisement

Pepper Crop; ನಿರಂತರ ಮಳೆ ಕಾರಣ: ಕಾಳುಮೆಣಸಿಗೆ ಕರಾಳವಾದ ಸೊರಗು ರೋಗ

01:56 AM Aug 26, 2024 | Team Udayavani |

ಸುಳ್ಯ: “ಕಪ್ಪು ಚಿನ್ನ’ ಎಂಬ ಖ್ಯಾತಿಯ ಕಾಳುಮೆಣಸು ಕೃಷಿಗೆ ಈ ಬಾರಿಯ ಅತಿವೃಷ್ಟಿ ಶಾಪವಾದಂತಾಗಿದೆ. ಅತಿ ಯಾದ ಮಳೆಯಿಂದಾಗಿ ಸೊರಗು ರೋಗ ಬಾಧಿಸಿದ್ದು, ಈಗಾಗಲೇ ಶೇ. 50ಕ್ಕೂ ಅಧಿಕ ಬೆಳೆ ನಾಶವಾಗಿ ರೈತರು ಆತಂಕಕ್ಕೀಡಾಗಿದ್ದಾರೆ.

Advertisement

ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ, ತೆಂಗು ಕೃಷಿಯೊಂದಿಗೆ ಮಿಶ್ರ ಬೆಳೆಯಾಗಿ ಕಾಳುಮೆಣಸು ಬೆಳೆಯಲಾಗುತ್ತದೆ. ಪ್ರಸ್ತುತ ಕಾಳುಮೆಣಸಿಗೆ ಪ್ರತೀ ಕೆ.ಜಿ.ಗೆ 615 ರೂ.ಗಳಷ್ಟು ಉತ್ತಮ ಧಾರಣೆಯೂ ಇದೆ. ಆದರೆ ಈಗೀಗ ಇದಕ್ಕೂ ರೋಗ ಬಾಧಿಸುತ್ತಿರುವ ಕಾರಣ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗುತ್ತಿದೆ.

ಹೆಚ್ಚುತ್ತಿರುವ ರೋಗಮಿಶ್ರ ಬೆಳೆ
ಮಳೆಗಾಲದಲ್ಲಿ ಬಳ್ಳಿ ಹಾಗೂ ಎಲೆಗಳಲ್ಲಿ ಶಿಲೀಂಧ್ರದ ಬೀಜಾಣು ಸುಲಭವಾಗಿ ಒಂದು ಗಿಡದಿಂದ ಮತ್ತೂಂದಕ್ಕೆ ಹರಡುತ್ತದೆ. ಮೊದಲು ಕಾಳುಮೆಣಸಿನ ಬಳ್ಳಿಯ ಬೇರುಗಳನ್ನು ಬಾಧಿಸಿ, ಬಳಿಕ ಬಳ್ಳಿ ಹಾಗೂ ಎಲೆಗಳನ್ನು ಆಕ್ರಮಿಸುತ್ತದೆ. ಬೇರುಗಳಿಗೆ ರೋಗ ಬಾಧಿಸಿದ ಕೆಲವೇ ದಿನಗಳಲ್ಲಿ ಕಾಳುಮೆಣಸಿನ ಎಲೆ, ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ದುರ್ಬಲವಾಗುತ್ತದೆ. ಬಳಿಕ ಇಡೀ ಬಳ್ಳಿ ಕಪ್ಪುಬಣ್ಣಕ್ಕೆ ಸೊರಗಿ ಕ್ರಮೇಣ ಸಾಯುತ್ತದೆ.ಈ ರೋಗ ಮಳೆಗಾಲ ಮತ್ತು ಬಳಿಕವೂ ಕಾಣಿಸಿ ಕೊಳ್ಳುತ್ತಿದ್ದು, ನಿಯಂತ್ರಣ ತ್ರಾಸದಾಯಕ. ಮಳೆಗಾಲದ ಲ್ಲಂತೂ ನಿಯಂತ್ರಣ ಅಸಾಧ್ಯ ಎಂಬಷ್ಟು ಕಷ್ಟ.

ಕೆಲವು ವಾರಗಳ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ಸುಳ್ಯ ಸಹಿತ ಹಲವೆಡೆ ಕಾಳುಮೆಣಸು ಬಳ್ಳಿಗಳು ಸಾಯುತ್ತಿರುವುದು ಹೆಚ್ಚಾಗಿ ಕಂಡುಬಂದಿದ್ದು, ರೈತರು ತೀವ್ರ ಆತಂಕಿತರಾಗಿದ್ದಾರೆ. ಸೊರಗು ರೋಗ ನಿಯಂತ್ರಣಕ್ಕೆ ಔಷಧ ಇದೆಯಾದರೂ ಹೆಚ್ಚಾಗಿ ಮೊದಲು ಬೇರನ್ನು ಬಾಧಿಸುವ ಕಾರಣ ತತ್‌ಕ್ಷಣಕ್ಕೆ ಇದು ಗಮನಕ್ಕೆ ಬರುವುದಿಲ್ಲ. ಎಲೆಗಳು ಬಾಡಿ ಉದುರಲು ಆರಂಭಿಸಿದಾಗಲೇ ರೋಗ ಬಾಧಿಸಿರುವುದು ಗೊತ್ತಾಗುವ ಕಾರಣ ಬಳಿಕ ನಿಯಂತ್ರಣ ಕಷ್ಟವಾಗುತ್ತಿದೆ ಎನ್ನುತ್ತಾರೆ ಕೃಷಿಕರು. ಆದರೆ ರೋಗ ಬಾಧಿಸುವ ಮೊದಲೇ ಬಳ್ಳಿ ಹಾಗೂ ಬುಡಕ್ಕೆ ಪೂರಕ ಔಷಧ ಸಿಂಪಡಣೆಯಿಂದ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ.

ಲಕ್ಷಣಗಳು
ಈ ರೋಗ ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತದೆ. ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡುಬಂದು, ಬಳಿಕ ಎಲೆಗಳಲ್ಲಿ ನಾರಿನಂಥ ಬಾಚು ಭಾಗ ಕಾಣುತ್ತದೆ. ಬಳಿಕ ಇದು ವ್ಯಾಪಿಸಿ ಎಲೆಗಳು ಉದುರಿ, ಬಳಿಕ ಬಳ್ಳಿಯೂ ನಾಶವಾಗುತ್ತದೆ. ಮುಖ್ಯ ಕಾಂಡದ ನೆಲಮಟ್ಟ ಅಥವಾ ಕುತ್ತಿಗೆ ಭಾಗದಲ್ಲಿ ರೋಗ ಬಾಧಿಸಿದಲ್ಲಿ ಪೂರ್ತಿ ಬಳ್ಳಿಸೊರಗಿ ಒಣಗುತ್ತದೆ.

Advertisement

ನಿಯಂತ್ರಣ ಕ್ರಮಗಳು
ರೋಗ ಬಾಧೆಯಿಂದಸತ್ತು ಹೋದ ಬಳ್ಳಿಗಳನ್ನು ಬೇರು ಸಹಿತ ಕಿತ್ತು ತೋಟದಿಂದ ಹೊರಗೆ ನಾಶಪಡಿಸುವುದು, ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಬಳ್ಳಿ ನೆಲದ ಮೇಲೆ ಹರಡದಂತೆ ಎಚ್ಚರ ವಹಿಸುವುದು ಹಾಗೂ ರೋಗ ಬಾರದಂತೆ ಪೂರಕ ಔಷಧ ಸಿಂಪಡಿಸುವುದು.

ಕಾಳುಮೆಣಸಿಗೆ ಬಾಧಿಸುವ ಸೊರಗು ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ರೋಗ ಬಾಧಿ ಸಿದ ಬಳಿಕ ನಿಯಂತ್ರಣ ಕಷ್ಟ. ತಾಲೂಕಿನಲ್ಲಿ ಸೊರಗು ರೋಗ ಬಾಧಿಸಿದ ಕೃಷಿಕರ ಮಾಹಿತಿ ಪಡೆಯುತ್ತೇವೆ.
-ಸುಹಾನಾ, ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ, ಸುಳ್ಯ

ನಮ್ಮ ತೋಟದಲ್ಲಿ 100ಕ್ಕೂ ಅಧಿಕ ಕಾಳುಮೆಣಸಿನ ಬಳ್ಳಿ ಇದ್ದು, ಅದರಲ್ಲಿ ಶೇ. 50ಕ್ಕೂ ಅಧಿಕ ಬಳ್ಳಿಗಳು ಸೊರಗು ರೋಗದಿಂದ ನಾಶಗೊಂಡಿವೆ.
-ಬಾಬು ಪಾಟಾಳಿ ಅಜ್ಜಾವರ, ಕೃಷಿಕರು

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.