Advertisement

ಮುಧೋಳ: ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆಯಾಗಲಿ

06:18 PM Jul 11, 2023 | Team Udayavani |

ಮುಧೋಳ: ನಿರಂತರ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ. ಇದರಿಂದ ಭೂಮಿಯು ಬರಡಾಗುವ ಸಾಧ್ಯತೆ ಹೆಚ್ಚು ಅದಕ್ಕಾಗಿ ರೈತರು ತಿಪ್ಪೆ ಗೊಬ್ಬರವನ್ನು ಹಾಕಿ ಸಾವಯುವ ಕೃಷಿ ಬೆಳೆಗಳನ್ನು ಬೆಳೆಯಬೇಕು, ಸಾವಯುವ ಕೃಷಿ ಬೆಳೆಗಳನ್ನು ಬೆಳೆದು ಅವುಗಳನ್ನು ಸೇವಿಸಬೇಕು. ಆಗಲೇ ಮನುಷ್ಯನ ಆರೋಗ್ಯ ಚೆನ್ನಾಗಿರಲು ಸಾಧ್ಯವೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವೈ. ಮಾಳೇದ ಹೇಳಿದರು.

Advertisement

ಬಾಗಲಕೋಟೆ ಬಿವಿವಿ ಸಂಘದ ಮುಧೋಳ ಎಸ್‌. ಆರ್‌.ಕಂಠಿ ಮಹಾವಿದ್ಯಾಲಯದ ಎನ್‌.ಎಸ್‌.ಎಸ್‌ ಘಟಕ 1 ಮತ್ತು 2ರ ಸಂಯುಕ್ತಾಶ್ರಯದಲ್ಲಿ ಕುಳಲಿ ದತ್ತು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಸೇವಾ ಶಿಬಿರದ ಸಂಜೆ ಮೂರನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾವಯುವ ಕೃಷಿ ಬೆಳೆಗಳ ಕುರಿತು ಅವರು ಮಾತನಾಡಿದರು.

ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕಿ ಅತೀ ಹೆಚ್ಚು ಉತ್ಪಾದನೆ ಮಾಡಿ ಹೆಚ್ಚು ಆದಾಯ ಗಳಿಸಬಹುದು ಆದರೆ, ರಾಸಾಯನಿಕ ಗೊಬ್ಬರ ಹಾಕಿ ಬೆಳೆಸಿದ ಬೆಳೆ ಸೇವಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರಿ ಅನಾರೋಗ್ಯಕ್ಕೆ
ತುತ್ತಾಗಬೇಕಾಗುತ್ತದೆ. ಈಗ ರೈತರು ಮತ್ತೆ ಸಾವಯುವ ಕೃಷಿ ಬೆಳೆಗಳನ್ನು ಬೆಳೆಯಲು ಮುಂದಾಗಿರುವುದು ಸಂತಸದ ವಿಷಯ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ ದಂಡನ್ನವರ ಸಾವಯುವ ತೋಟಗಾರಿಕೆ ಬೆಳೆಗಳ ಕುರಿತು ಮಾತನಾಡಿ, ತೋಟಗಾರಿಕೆ ಬೆಳೆಗಳಾದ ವಿವಿಧ ಬಗೆಯ ಹಣ್ಣುಗಳು, ಹಲವು ತರಹದ ತರಕಾರಿಗಳು, ಅರಿಶಿಣ, ಹೂವು ಮುಂತಾದ ಬೆಳೆಗಳನ್ನು ಬೆಳೆದು ಸಾಕಷ್ಟು ಸಂಪಾದನೆ ಮಾಡಬಹುದು. ಕಡಿಮೆ ಭೂಮಿಯಲ್ಲಿ ವಿವಿಧ ಬಗೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಧ್ಯ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ, ಅಷ್ಟೇ ಅಲ್ಲ ಪ್ರೋತ್ಸಾಹ ಧನವನ್ನು ನೀಡುತ್ತಿದೆ, ವಿದ್ಯಾವಂತರು ಅದರಲ್ಲೂ ವಿವಿಧ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ
ಸಾಕಷ್ಟು ಜನರು ತಾವು ನಿರ್ವಹಿಸುವ ಕೆಲಸಕ್ಕೆ ಗುಡ್‌ ಬೈ ಹೇಳಿ ಹೊಲ-ಗದ್ದೆಗಳಿಗೆ ತೆರಳಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಸಾಕಷ್ಟು ಸಂಪಾದನೆ ಮಾಡಿರುವವರ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.

ಗ್ರಾಮದ ಶಿವಾನಂದ ಗಣಿ ಸಾವಯವ ಕೃಷಿ ಪದ್ದತಿ ಕುರಿತು ಮಾತನಾಡಿ, ರೈತರು ಹೆಚ್ಚಾಗಿ ರಾಸಾಯನಿಕ ಪದ್ದತಿಗೆ ಅಂಟಿಕೊಂಡಿದ್ದು, ಇದರಿಂದ ಮಣ್ಣಿನ ಫಲವತ್ತತೆಗೆ ಧಕ್ಕೆಯಾಗುತ್ತಿದೆ. ಪ್ರತಿಯೊಬ್ಬರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಹಾಗೂ ಸಮಗ್ರ ಕೃಷಿ ಮಾಡುವುದರಿಂದ ರೈತನಿಗೆ ನಷ್ಟ ಎಂಬುದೇ ಇಲ್ಲ. ಪ್ರತಿಯೊಬ್ಬ ರೈತರು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿದಲ್ಲಿ ಉತ್ತಮ ಬೆಳೆ ಬೆಳೆದು ಭೂಮಿಯ ಪಲವತ್ತತೆ ಕಾಯ್ದುಕೊಳ್ಳಬಹುದು.

Advertisement

ಪ್ರತಿಯೊಬ್ಬರ ಆರೋಗ್ಯದ ದೃಷ್ಟಿ ಹಾಗೂ ಭೂಮಿಯ ಫಲವತ್ತತೆ ದಷ್ಟಿಯಿಂದ ಸಾವಯವ ಕೃಷಿ ಮೂಲಕ ಬೆಳೆಗಳನ್ನು ಬೆಳೆಯಬೇಕು, ರೈತರು ಹಾಗೂ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಬೇಕು ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಎಂ.ವ್ಹಿ.ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕುಳಲಿ ಗ್ರಾಮದ ಪ್ರಮುಖ ರಾದ ಬಿ.ಡಿ.ಬಡಿಗುಡದಾರ, ಕೆ.ಎಂ. ಮಂಟೂರ, ಬಿ.ಎಲ್‌.ಬಳವಾಡ, ಗಂಗಪ್ಪ ಬೆಳಗಾಂವ, ಬಸವರಾಜ ಗಣಿ, ಶಂಭು ಗಣಿ, ಬಿ.ಆರ್‌.ಅನ್ಸಾರಿ, ಎಂ.ಆರ್‌. ಪಾಟೀಲ, ಪರಸಪ್ಪ ವಜ್ಜರಮಟ್ಟಿ, ಸದಾಶಿವ ಚವ್ಹಾಣ, ಪ್ರಕಾಶ ವಜ್ಜರಮಟ್ಟಿ. ಲೋಕೇಶ ರಾಠೊಡ, ಪ್ರೊ| ಪಿ.ಡಿ. ಕುಂಬಾರ ಇತರರು ವೇದಿಕೆ ಮೇಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next