ಮುಧೋಳ: ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಈಗ ಶಿಥಿಲಾವಸ್ಥೆಗೆ ತಲುಪಿದೆ. ಅತ್ಯಂತ ಹಳೆಯದಾದ ಈ ಕಟ್ಟಡದ ನಾನಾ ಭಾಗಗಳಲ್ಲಿ ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದೆ. ಮಳೆಗಾಲದಲ್ಲಿ ಎಲ್ಲೆಡೆ ಸೋರುತ್ತಿದ್ದು, ಅನೇಕ ಕಡೆ ಸಿಮೆಂಟ್ ಉದುರಿದೆ. ಐದಾರು ಕೊಠಡಿಗಳಿರುವ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ನಿತ್ಯ ಭಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಗೋಡೆ ಸಹ ಅನೇಕ ಮೂಲೆಗಳಲ್ಲಿ ಬಿರುಕು ಬಿಟ್ಟಿದೆ.
ಶಿಕ್ಷಣಾಧಿಕಾರಿಗಳ ಕೊಠಡಿ ಮೇಲ್ನೋಟಕ್ಕೆ ಸ್ವಲ್ಪ ಗಟ್ಟಿ ಎನಿಸಿದರೂ ಒಳಭಾಗದಲ್ಲಿರುವ ಶೌಚಾಲಯವಂತೂ ಸಂಪೂರ್ಣ ಅಪಾಯದ ಅಂಚಿನಲ್ಲಿದ್ದು, ಚಾವಣಿ ಯಾವಾಗ ಬೇಕಾದರೂ ಕುಸಿಯಬಹುದೆಂಬ ಪರಿಸ್ಥಿತಿ ಇದೆ. ಮೂಲೆ ಸಂಪೂರ್ಣವಾಗಿ ಸೀಳಿದೆ. ಇದಲ್ಲದೇ ಅಧಿಧೀಕ್ಷಕರ, ಶಿಕ್ಷಣ ಸಂಯೋಜಕರ, ಮ್ಯಾನೇಜರ್, ಗುಮಾಸ್ತರು ಕೂರುವ ಕೊಠಡಿಗಳ ಚಾವಣಿಯಲ್ಲಿ ಬಿರುಕು ಬಿಟ್ಟಿದ್ದು, ಸಿಮೆಂಟ್ ಉದುರಿ ಕಚೇರಿಗೆ ಆಗಮಿಸಿದ ಕೆಲ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸರಕಾರದ 32 ಇಲಾಖೆಗಳಲ್ಲಿ ಒಂದಾದ ಶಿಕ್ಷಣ ಇಲಾಖೆಯೂ ಅತ್ಯಂತ ಮಹತ್ವದ್ದಾಗಿದೆ. ಸರಕಾರದ ಮಹತ್ವದ ಎಲ್ಲ ಯೋಜನೆಗಳನ್ನು ಅಧಿಕಾರಿಗಳ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಸಮುದಾಯದವರ ಮನೆ ಮನೆಗೂ ಮುಟ್ಟಿಸುವ ಕಾರ್ಯ ಶಿಕ್ಷಣ ಇಲಾಖೆಯದಾಗಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯು ಅಪಾಯದ ಅಂಚಿನಲ್ಲಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಭಾರೀ ಅನಾಹುತ ಸಂಭವಿಸುವ ಅಪಾಯವಿದೆ.
ಬಾಗಲಕೋಟೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ 31-5-2016ರಂದು ಮುಧೋಳ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ಕಚೇರಿ ಕಟ್ಟಡ ದುರಸ್ತಿ, ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿ ಹಾಗೂ ನೀಲಿನಕ್ಷೆ ತಯಾರಿಸಿ ಕಳುಹಿಸುವಂತೆ ತಿಳಿಸಿತ್ತು. ಅದರಂತೆ ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ 16-6-2016ರಂದು ನೀಲನಕ್ಷೆ, ಕಟ್ಟಡದ ಉತಾರ, ರೂ.16.70 ಲಕ್ಷದ ಅಂದಾಜು ಪತ್ರಿಕೆ ಕಳುಹಿಸಲಾಗಿದೆ. ಅಲ್ಲದೇ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿಪಂ ಉಪವಿಭಾಗ ಮುಧೋಳ ಇವರಿಗೂ 6-6-2018ರಂದು ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಅಲ್ಲದೇ ಈ ಬಗ್ಗೆ ಶಾಸಕ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಅವರಿಗೂ ಮನವಿ ಸಲ್ಲಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿಥಿಲಗೊಂಡಿದೆ ಎಂಬ ಅಭಿಯಂತರ ವರದಿ ಆಧರಿಸಿ, ದುರಸ್ತಿ ಮಾಡಿಸಲು ಮೇಲಾಧಿಕಾರಿಗಳಿಗೆ ಈ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಹಿರೇಮಠ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ನಾನು ಕೂಡಾ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ.
ವಿಠ್ಠಲ ದೇವನಗಾಂವ, ಬಿಇಒ.
ಮಹಾಂತೇಶ ಈ. ಕರೆಹೊನ್ನ