ಮುದ್ದೇಬಿಹಾಳ: ಮಾಜಿ ಸಚಿವ, ಬಬಲೇಶ್ವರದ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವೀರಶೈವ, ಲಿಂಗಾಯತರ ಕುರಿತ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ಸ್ವಾಗತಿಸಿದ್ದಾರೆ.
ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು, ಪಂಚಪೀಠಾಧಿಶರು, ವಿರಕ್ತಮಠಗಳು, ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಕೂಡಿ ಚರ್ಚೆ ಮಾಡಿ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಮುಂದುವರೆಯುವುದಾಗಿ ಹೇಳಿದ್ದು ಬದಲಾವಣೆಯ ಸಂಕೇತವಾಗಿದೆ ಎಂದಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಹೋರಾಟವನ್ನು ಸದ್ಯಕ್ಕೆ ಮಾಡುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಲುವು ತಳೆದಿರುವುದು ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಮಹಾಲಿಂಗಪುರ ಪುರಸಭೆ 3ನೇ ವಾರ್ಡಿನ ಉಪಚುನಾವಣೆ: ಶಾಂತಿಯುತ ಮತದಾನ
ಸಮಾಜದ ಮಠಗಳಿಗೆ ಒಳಿತಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ ಸಮಾಜಕ್ಕೆ ಒಳ್ಳೆಯದಾಗುವ ನಿರ್ಣಯ ಕೈಗೊಂಡಿದ್ದು ಸ್ತುತ್ಯಾರ್ಹವಾಗಿದೆ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿಗೆ ಪಾಟೀಲರು ಶ್ರಮಿಸುವ ವಿಶ್ವಾಸ ತಮಗಿದ್ದು ಇದಕ್ಕೆ ಮಠಾಧೀಶರ ಬೆಂಬಲ ಸದಾ ಕಾಲ ಇರುತ್ತದೆ. ಪಾಟೀಲರು ಮತ್ತೇ ಪ್ರತ್ಯೇಕತೆಯ ಕೂಗಿಗೆ ದನಿಯಾಗುವುದಿಲ್ಲ ಎನ್ನುವ ನಂಬಿಕೆ ತಮಗಿದೆ ಎಂದು ಅವರು ತಿಳಿಸಿದರು.