ಮುದ್ದೇಬಿಹಾಳ: ತಾಲೂಕಿನ ಪಿಯುಸಿ ಇಂಗ್ಲಿಷ್ ಪತ್ರಿಕೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು, ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಉಚಿತವಾಗಿ ಒಟ್ಟಾರೆ 50,000 ಮಾಸ್ಕ್ ವಿತರಿಸಲು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತೀರ್ಮಾನಿಸಿದ್ದು, ಇದನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ (ಬಿಎಸ್‌ಜಿ) ಮುದ್ದೇಬಿಹಾಳ ತಾಲೂಕು ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಕಾರ್ಯಾಚರಣೆಗೊಳಿಸಲು ಮುಂದಾಗಿದ್ದಾರೆ.
ಇಲ್ಲಿನ ತಮ್ಮ ದಾಸೋಹನಿಲಯದಲ್ಲಿ ತಮ್ಮನ್ನು ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಂಚಿಕೆ ಕುರಿತು ಮನವಿ ಮಾಡಿಕೊಳ್ಳಲು ಆಗಮಿಸಿದ್ದ ಸಂಸ್ಥೆಯ ಪದಾಧಿಕಾರಿಗಳ ಜತೆ ಚರ್ಚಿಸಿದ ಶಾಸಕರು, ಈ ಬಗ್ಗೆ ಯೋಜನೆ ರೂಪಿಸುವಂತೆ ಮತ್ತು ಹೇಗೆ ವಿತರಿಸಬೇಕು ಎನ್ನುವುದನ್ನು ತೀರ್ಮಾನಿಸುವಂತೆ ಸಲಹೆ ನೀಡಿದರು. ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಿ.ಬಿ.ವಡವಡಗಿ, ಅಧ್ಯಕ್ಷ ಪ್ರೊ| ಎಸ್.ಎಸ್. ಹೂಗಾರ, ಕಾರ್ಯದರ್ಶಿ ಜಿ.ಎಚ್. ಚವ್ಹಾಣ, ಖಜಾಂಚಿ ಗೋಪಾಲ ಹೂಗಾರ ಅವರು ಈಗಾಗಲೇ ಶಿಕ್ಷಣ ಸಚಿವ ಸುರೇಶಕುಮಾರರು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿರುವ ಬಿಜಿಎಸ್ ಮುಖಾಂತರ ಮಾಸ್ಕ್ ಹಂಚಿಕೆಗೆ ತಿಳಿಸಿದ್ದಾರೆ.
ಬಿಜಿಎಸ್‌ನ ರಾಜ್ಯ ಆಯುಕ್ತ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ಸ್ಥಳೀಯ ದಾನಿಗಳ ನೆರವು ಪಡೆಯುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ಶಾಸಕರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೊರೊನಾ ಸಂಕಷ್ಟದಲ್ಲಿರುವ ಬಡವರಿಗೆ ನೆರವು ನೀಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅದರ ಮುಂದುವರಿದ ಭಾಗವಾಗಿ ಮಾಸ್ಕ್ ಗಳನ್ನು ಒದಗಿಸಿ ಬಡ ವಿದ್ಯಾರ್ಥಿಗಳ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಚರ್ಚೆಯ ಅಂತಿಮ ಹಂತದಲ್ಲಿ ಮಾತನಾಡಿದ ಶಾಸಕರು, ತಾಲೂಕಿನಲ್ಲಿ 5500 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವುದಾಗಿ ಬಿಇಒ ಈಗಾಗಲೇ ಅಂಕಿಸಂಖ್ಯೆ ನೀಡಿದ್ದಾರೆ. ಇವರೊಟ್ಟಿಗೆ ಪರೀಕ್ಷೆಯಲ್ಲಿ ಅಂದಾಜು 500 ಶಿಕ್ಷಕರು ಭಾಗವಹಿಸಲಿದ್ದಾರೆ. ಎಲ್ಲ ಸೇರಿ ಒಟ್ಟು 6000 ಮಂದಿಗೆ ಪ್ರತಿ ವಿಷಯಕ್ಕೆ ಒಂದರಂತೆ ತಲಾ 6 ಮೂರು ಪದರಿನ ಮರಳಿ ಬಳಸಬಲ್ಲ ಅಥವಾ ಮರು ಬಳಕೆಯಾಗದ ಮಾಸ್ಕ್ ವಿತರಿಸಲು ಯೋಜನೆ ರೂಪಿಸಿದ್ದೇನೆ. ಪಿಯುಸಿ ವಿದ್ಯಾರ್ಥಿಗಳಿಗೂ ಮಾಸ್ಕ್ ವಿತರಿಸುತ್ತೇನೆ. ಒಟ್ಟಾರೆ 50,000 ಮಾಸ್ಕ್ ತಯಾರಿಸಲು ತಿಳಿಸಲಾಗುವುದು ಎಂದು ತಿಳಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಬಸವರಾಜ ನಂದಿಕೇಶ್ವರಮಠ, ಸಹಕಾರ್ಯದರ್ಶಿ ಎಲ್. ಕೆ.ನದಾಫ್, ಎಂಜಿವಿಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಯು.ಸಿ. ಕೋನರಡ್ಡಿ ಇದ್ದರು