ಮುದ್ದೇಬಿಹಾಳ: ಕೊಣ್ಣೂರು ಗ್ರಾಮದ ಬಿಜೆಪಿ ಮುಖಂಡ ಶಿವನಗೌಡ ತಾಳಿಕೋಟಿ ಸ್ವತಃ ತಾವೇ ಹೊಸ ಬಟ್ಟೆಯಿಂದ ಮಾಸ್ಕ್ ಹೊಲಿದು ಗ್ರಾಮೀಣ ಜನತೆಗೆ ಉಚಿತವಾಗಿ ವಿತರಿಸುವ ಜತೆಗೆ ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಮತ್ತು ಸಾಮಾಜಿಕ ಅಂತರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶಿವನಗೌಡ ತಾಳಿಕೋಟಿ ಅವರು ಈವರೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿಸಿ ಗ್ರಾಮೀಣ ಭಾಗದ ವೃದ್ದರು, ಮಹಿಳೆಯರು, ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ.
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕೋಟ್ಯಂತರ ರೂ. ಖರ್ಚು ಮಾಡಿ ಕಡುಬಡವರಿಗೆ ಆಹಾರ ಸಾಮಗ್ರಿ ಕಿಟ್ ಹಂಚಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಕೋವಿಡ್ ವಾರಿಯರ್ಸ್‌ಗಳಾಗಿರುವ ಆಶಾ, ಆರೋಗ್ಯ ಕಾರ್ಯಕರ್ತರು, ವೈದ್ಯರು, ಪೊಲೀಸರಿಗೆ ಗುಣಮಟ್ಟದ ಎನ್ -95 ಮಾಸ್ಕ್ ವಿತರಿಸುತ್ತಿದ್ದಾರೆ. ಅವರ ಅಭಿಮಾನಿಯಾದ ನಾನು ಅವರಿಂದ ಪ್ರೇರಣೆಗೊಂಡು ಮನೆಯಲ್ಲೇ 3 ಪದರುಗಳ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸಿ ಸಮಾಜ ಸೇವೆ ಮಾಡುತ್ತಿರುವುದಾಗಿ ಶಿವನಗೌಡ ತಾಳಿಕೋಟಿ ಹೇಳುತ್ತಾರೆ.
ಮಾಸ್ಕ್ ನೀಡುವುದು ಮಾತ್ರವಲ್ಲದೆ ಅದರ ಬಳಕೆ, ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಸಾಮಾಜಿಕ ಅಂತರದ ಮಹತ್ವ ತಿಳಿಸುತ್ತಿರುವ ಶಿವನಗೌಡರ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕೊಣ್ಣೂರು ಗ್ರಾಮದ ಸಿದ್ದನಗೌಡ ಗೌಡರ, ಸಂಗನಗೌಡ ಕವಡಿಮಟ್ಟಿ, ಚಿದಾನಂದ ಯಾಳವಾರ, ಬಸಪ್ಪ ಗಣಿ, ರಾಮಣ್ಣ ಗಣಿ, ಶಿವಶರಣ ಹಡಪದ, ವಾಲ್ಮೀಕಿ ಸಂಘದ ಯುವಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಲಿಗೆ ಕೆಲಸದಲ್ಲಿರುವ ಲಕ್ಷಾಂತರ ಅಸಂಘಟಿತ ಕಾರ್ಮಿಕರು ಕೊರೊನಾ ಲಾಕಡೌನ್‌ನಿಂದ ಸಂಕಷ್ಟದಲ್ಲಿದ್ದಾರೆ. ಇವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಬೇಕು. ಈ ಪ್ಯಾಕೇಜ್ ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬ ಕಾರ್ಮಿಕ 150-200 ಮಾಸ್ಕ್ ತಯಾರಿಸಿ ತಾಲೂಕು ಆಡಳಿತಕ್ಕೆ ಒಪ್ಪಿಸಬೇಕು. ಇಂಥವುಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆಗೆ
ಮುಟ್ಟಿಸಬಹುದು. ಸರ್ಕಾರ ಈ ರೀತಿ ಮಾಡಲು ಮುಂದಾದರೆ ಒಂದೇ ವಾರದಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಮಾಸ್ಕ್ಗಳನ್ನು ಒದಗಿಸಿ ಸೋಂಕಿನಿಂದ ಕಾಪಾಡಬಹುದು.
ಶಿವನಗೌಡ ತಾಳಿಕೋಟೆ,
ಬಿಜೆಪಿ ಧುರೀಣ ಕೊಣ್ಣೂರ
ಡಿ.ಬಿ.ವಡವಡಗಿ