ಮುದ್ದೇಬಿಹಾಳ: ಆರೋಗ್ಯ ಇಲಾಖೆ ಸಿಬ್ಬಂದಿ, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಬಡಾವಣೆಗಳಿಗೆ, ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕಾರ ನೀಡಿ ಮಾರಕ ರೋಗಗಳಿಗೆ ಕಾರಣವಾಗುವ ಲಾರ್ವಾ ಉತ್ಪತ್ತಿ ತಡೆಗಟ್ಟಲು ಸಹಕಾರ ನೀಡಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಜೈಬುನ್ನೀಸಾ ಬೀಳಗಿ ಮನವಿ ಮಾಡಿದರು.
ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ ವತಿಯಿಂದ ರಾಷ್ಟ್ರೀಯ ಕೀಟಜನ್ಯ ನಿಯಂತ್ರಣ ಕಾರ್ಯಕ್ರಮದಡಿ ಏರ್ಪಡಿಸಿದ್ದ ರಾಷ್ಟ್ರೀಯ ಡೆಂಘೀ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಸಿಬ್ಬಂದಿ ಈಡೀಸ್‌ಸೊಳ್ಳೆ ಮರಿ ಅಭಿವೃದ್ಧಿ ತಾಣಗಳ ಸಮೀಕ್ಷೆ ನಡೆಸುತ್ತಾರೆ. ಲಾರ್ವಾ ಕಂಡುಬಂದರೆ ಆರೋಗ್ಯ ಶಿಕ್ಷಣದ ಮೂಲಕನಿರ್ಮೂಲನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಸಾರ್ವಜನಿಕರ ಸಹಕಾರ ಇದ್ದರೆ ಈ ಕಾರ್ಯ ಯಶಸ್ವಿಯಾಗಿ ನಡೆದು ಬಡಾವಣೆಗಳು ರೋಗಮುಕ್ತಗೊಳ್ಳುತ್ತವೆ ಎಂದರು.
ವಿಜಯಪುರ ವಿಬಿಡಿಸಿ ಕಾರ್ಯಾಲಯದ ಕೀಟ ಶಾಸ್ತ್ರಜ್ಞ ರಿಯಾಜ್ ದೇವರಳ್ಳಿ ಮಾತನಾಡಿ, ಯಾವುದೇ ಜ್ವರವಿರಲಿ ಶೀಘ್ರ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆಪಡೆಯಬೇಕು. ಮಲಗುವಾಗ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಬೇಕು. ವಾರಕ್ಕೊಮ್ಮೆ ನೀರು ಶೇಖರಣಾ ಸಲಕರಣೆಗಳನ್ನು ಖಾಲಿ ಮಾಡಿ ಸ್ವತ್ಛಗೊಳಿಸಿ ನೀರು ತುಂಬಿಸಿ ಮುಚ್ಚಿಡಬೇಕು. ಸೊಳ್ಳೆ ಕಡಿತದಿಂದ ದೂರವಿರಲು ಸಾಧ್ಯವಾದ ಎಲ್ಲ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. ಡೆಂಘೀ ಜ್ವರ ನಿಯಂತ್ರಣಕ್ಕೆ ಜನ ಸಮುದಾಯದ ಸಹಕಾರ ಅವಶ್ಯವಾಗಿದೆ. ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಜನಜಾಗೃತಿಯೊಂದೇ ಪರಿಹಾರ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಅನುಸೂಯ ತೇರದಾಳ, ಎಸ್.ಎಸ್. ಮೇಟಿ, ಹಿರಿಯ ಪ್ರಯೋಗಾಲಯ ತಂತ್ರಜ್ಞ ಈರಣ್ಣ ಚಿನಿವಾರ, ವಿಬಿಡಿಸಿ ಕಾರ್ಯಾಲಯದ ಶಿವು ಬೊಮ್ಮನಹಳ್ಳಿ, ಎಂಟಿಎಸ್ ಎಸ್ .ಸಿ. ರುದ್ರವಾಡಿ, ಹಿರಿಯ ಆರೋಗ್ಯ ಸಹಾಯಕ ಮಹಾದೇವಪ್ಪ ಹಿಂಗೋಲಿ, ಕಿರಿಯ ಆರೋಗ್ಯ ಸಹಾಯಕರಾದ ಮಹೇಶ ಕೊಪ್ಪ, ವೀರೇಶ ಭಜಂತ್ರಿ, ಶ್ರೀಕಾಂತ ಸಜ್ಜನ, ಆರೋಗ್ಯ ಸಹಾಯಕ ಚರಲಿಂಗೇಶ ಬಿದರಕುಂದಿ ಪಾಲ್ಗೊಂಡಿದ್ದರು. ಎಂ.ಎಸ್. ಗೌಡರ ನಿರೂಪಿಸಿದರು. ಈ ವೇಳೆ ಆಶ್ರಯ ಕಾಲೋನಿಯ 20 ಕುಟುಂಬದವರಿಗೆ ಸಾಂಕೇತಿಕವಾಗಿ ಸೊಳ್ಳೆ ಪರದೆ ವಿತರಿಸಲಾಯಿತು.