ಮುದ್ದೇಬಿಹಾಳ: ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಪತ್ನಿ ಮಹಾದೇವಿ ಅವರೊಂದಿಗೆ ಕೋವಿಡ್ ವಾರಿಯರ್ಸ್‌ಗಳಾಗಿರುವ ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರು, ಆಶಾ, ಆರೋಗ್ಯ ಕಾರ್ಯಕರ್ತರು, ಆಂಬ್ಯುಲೆನ್ಸ್ ಸಿಬ್ಬಂದಿಗೆ ಮಂಗಳವಾರ ಮಾಸ್ಕ್, ಹ್ಯಾಂಡ್ ಗ್ಲೌಸ್, ಆಹಾರಧಾನ್ಯದ ಕಿಟ್ ವಿತರಿಸಿ ಅವರ ನಿಸ್ಪೃಹ ಸೇವೆಗೆ ಧನ್ಯವಾದ ಸಲ್ಲಿಸಿದರು.
ಈ ವೇಳೆ ತಹಶೀಲ್ದಾರ್ ಜಿ.ಎಸ್. ಮಳಗಿ, ಸಿಪಿಐ ಆನಂದ ವಾಗಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಜೊತೆಗೂಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ಕಡು ಬಡವರಿಗೆ ಆಹಾರಧಾನ್ಯದ ಕಿಟ್‌ಗಳನ್ನು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಯುಜಿಡಿ ಕೆಲಸಕ್ಕೆ ಬಂದಿರುವ ಆಂಧ್ರದ ಕೂಲಿ ಕಾರ್ಮಿಕರ ಅಂದಾಜು 25 ಕುಟುಂಬಗಳಿಗೆ ವಿದ್ಯಾಸಂಸ್ಥೆಯೊಂದರ ಮುಖ್ಯಸ್ಥೆ ಬಸಮ್ಮ ಸಿದರಡ್ಡಿ ನೀಡಿದ ಅಕ್ಕಿ ಮತ್ತು ತಮ್ಮ ವತಿಯಿಂದ ದಿನಸಿ ಕಿಟ್ ವಿತರಿಸಿದರು.
ಈ ವೇಳೆ ಹಲವರು ತಮಗೆ ರೇಷನ್ ಕಾರ್ಡ್ ಇಲ್ಲ ಎಂದು ಗೋಳು ತೋಡಿಕೊಂಡು ಕಣ್ಣೀರು ಸುರಿಸಿದಾಗ ತಹಶೀಲ್ದಾರ್‌ಗೆ ಸೂಚಿಸಿ ಇಂಥವರ ಪಟ್ಟಿ ಮಾಡಿ ಅವರಿಗೆ ಕಾರ್ಡ್ ಕೊಡಬೇಕು. ಕಾರ್ಡ್ ದೊರೆಯುವವರೆಗೆ ಅಕ್ಕಿ, ಗೋಧಿ ವಿತರಿಸಬೇಕು. ಸರ್ಕಾರದಿಂದ ಅವಕಾಶ ಇಲ್ಲದಿದ್ದಲ್ಲಿ ವೈಯುಕ್ತಿವಾಗಿ ನಾನು ಕೊಡುವ ರೇಷನ್ ಹಂಚಬೇಕು ಎಂದು ಸೂಚಿಸಿದರು. ವಿವಿಧ ಸಂದರ್ಭಗಳಲ್ಲಿ ಮಾತನಾಡಿದ ಶಾಸಕರು, ಸೋಂಕಿತರ ಜೊತೆ ನೇರ ಸಂಪರ್ಕಕ್ಕೆ ಬರುವ ಪೊಲೀಸ್, ಆರೋಗ್ಯ, ಆಶಾ ಕಾರ್ಯಕರ್ತರು, ಸ್ವತ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕು. ಇವರು ತಮ್ಮ ಪ್ರಾಣದ ಹಂಗು ತೊರೆದು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವುದರಿಂದಲೇ ನಮ್ಮಂಥ ಸಾರ್ವಜನಿಕರು ಕೊರೊನಾ ಆತಂಕ ಇಲ್ಲದೆ ನೆಮ್ಮದಿಯಿಂದ ಇರುವುದು ಸಾಧ್ಯವಾಗಿದೆ ಎಂದರು.
ಬಡವರು ನಮ್ಮ ಪಾಲಿನ ದೇವರು. ಅವರು ಹಸಿವಿನಿಂದ ಇರುವುದನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಲಾಕ್‌ಡೌನ್ ಮುಗಿಯುವವರೆಗೆ ಒಂದು ಕುಟುಂಬಕ್ಕೆ ಅಗತ್ಯವಿರುವ ಆಹಾರಧಾನ್ಯಗಳ ಕಿಟ್ ವಿತರಿಸುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಕಿಟ್ ವಿತರಣೆ ನಡೆಯುತ್ತಿದೆ. ನಿಜವಾದ ಬಡವರಿಗೆ ಕಿಟ್ ದೊರಕದೆ ಇದ್ದಲ್ಲಿ ನನ್ನ ಅಥವಾ ನಮ್ಮ ಕಾರ್ಯಕರ್ತರ ಗಮನಕ್ಕೆ ತಂದಲ್ಲಿ ಅಂಥವರಿಗೂ ಕಿಟ್ ಕೊಡಲಾಗುತ್ತದೆ ಎಂದರು. ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರಡ್ಡಿ ಇದ್ದರು.