ಮುದ್ದೇಬಿಹಾಳ: ಚಿರ್ಚನಕಲ್ ಗ್ರಾಮದ ಭೂಸೇನೆ ಯೋಧ ಮಂಜುನಾಥ ಬೂದಿಹಾಳ, ಅವರ ಸಹೋದರಿ ಮತ್ತು ಕುಟುಂಬಕ್ಕೆ ಟಟಲೀಸ್ ರಕ್ಷಣೆ ಒದಗಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು ಎಂದು ಕೋರಿ ಭಾರತೀಯ ಭೂಸೇನೆ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸೇನೆ ಅಧಿಕಾರಿಗಳು ಬರೆದ ಪತ್ರವನ್ನು ಸೈನಿಕ ಮಂಜುನಾಥ ಬೂದಿಹಾಳ ಅವರು ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿಯಲ್ಲಿರುವ ಸ್ಟೇಷನ್ ಹೆಡ್‌ಕ್ವಾಟ್ರಸ್ ಮುಖ್ಯಸ್ಥರು, ವಿಜಯಪುರ ಸೇಷನ್ಸ್ ಕೋರ್ಟ್ ರಜಿಸ್ಟ್ರಾರ್ ಮತ್ತು ವಿಜಯಪುರದ ಸೈನಿಕ ಕಲ್ಯಾಣ ಕಚೇರಿಗೆ ತಲುಪಿಸಿ ರಕ್ಷಣೆ ಕೊಡಬೇಕು ಎಂದು ಕೋರಿದ್ದಾರೆ.
ಮಂಜುನಾಥ ಬೂದಿಹಾಳ ಅವರು ಭಾರತೀಯ ಸೇನೆಯಲ್ಲಿ ಸಿಗ್ನಲ್ ಮ್ಯಾನ್ ಎಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು 2017ರ ಜೂನ್ ತಿಂಗಳಲ್ಲಿ ರಜೆ ಮೇಲೆ ಬಂದಿದ್ದಾಗ ಇವರ ಸಹೋದರಿಯ ಮೇಲೆ ರಾಮಬಾಬು ಭೋಗಣ್ಣ ಅನ್ನಗೌನಿ ಎನ್ನುವವರು ದೌರ್ಜನ್ಯ ನಡೆಸಿದ್ದರು. ಇದನ್ನು ಪ್ರಶ್ನಿಸಿದ್ದ ಮಂಜುನಾಥನ ಮೇಲೆ ರಾಮಬಾಬು ಹಿಂಬಾಲಕರು ಹಲ್ಲೆಗೆ ಮುಂದಾಗಿದ್ದರು.
ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮಂಜುನಾಥ ಅವರು ತಮ್ಮ ಬಳಿ ಇರುವ ಪಿಸ್ತೂಲ್ನಿಂದ ರಾಮಬಾಬು ಮತ್ತು ಅವರ ಸಹಚರರನ್ನು ಬೆದರಿಸಿದ್ದರು ಎಂದು ಪತ್ರದಲ್ಲಿ ಸೇನೆ ಹಿರಿಯ ಅಧಿಕಾರಿಗಳು ಮಂಜುನಾಥನ ಹೇಳಿಕೆ ಆಧಾರಿಸಿ ತಿಳಿಸಿದ್ದಾರೆ.
ಆ ಘಟನೆ ಹಿನ್ನೆಲೆ ಸ್ಥಳೀಯ ಪೊಲೀಸರು ರಾಮಬಾಬು, ಆತನ ಸಹಚರರನ್ನು ಅರೆಸ್ಟ್ ಮಾಡುವ ಬದಲು ಮಂಜುನಾಥನ ವಿರುದ್ಧವೇ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ ಎಂದು ಪತ್ರದಲ್ಲಿ ತಿಳಿಸಿ ಸಂದರ್ಭಾನುಸಾರ ನಡೆದ ಘಟನಾವಳಿಗಳ ವಿವರ ನೀಡಿದ್ದಾರೆ. ಮಾತ್ರವಲ್ಲದೆ ಆರೋಪಿಯು ಮಂಜುನಾಥ ಮತ್ತು ಅವರ ಸಹೋದರಿಗೆ ಬೆದರಿಕೆ ಹಾಕುತ್ತಿದ್ದು ಪೊಲೀಸ್ ರಕ್ಷಣೆ ಕೋರಿದ್ದರೂ ಸರಿಯಾಗಿ ಸ್ಪಂದಿಸಿಲ್ಲ. ಈಗಲಾದರೂ ಮಂಜುನಾಥ ಮತ್ತು ಅವರ ಸಹೋದರಿಗೆ ಪೊಲೀಸ್ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ಅವರ ಮನವಿ ಪರಿಗಣಿಸಿ ಇಲ್ಲಿನ ಸಿಪಿಐ ಕಚೇರಿಯಿಂದ ಅವರ ಮನವಿಗೆ ಹಿಂಬರಹ ನೀಡಲಾಗಿದ್ದು ಮಂಜುನಾಥ ಅವರು ಸಲ್ಲಿಸಿದ್ದ ದೂರಿನ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಾಲಯದಲ್ಲಿರುವ ಈ ಪ್ರಕರಣ ಇತ್ಯರ್ಥವಾಗುವವರೆಗೆ ಮಂಜುನಾಥ ಮತ್ತು ಅವರ ಸಹೋದರಿಗೆ ಯಾವುದೇ ತೊಂದರೆ ಮಾಡಬಾರದು ಎಂದು ರಾಮಬಾಬುಗೆ ಎಚ್ಚರಿಕೆ ನೀಡಲಾಗಿದೆ. ಈ ಪ್ರಕರಣಗಳ ಮುದ್ದತ್ ಅವಧಿಯಲ್ಲಿ ಮಂಜುನಾಥ ಮತ್ತು ಅವರ ಸಹೋದರಿ ರಕ್ಷಣೆ ಕೋರಿದಲ್ಲಿ ರಕ್ಷಣೆ ನೀಡುವಂತೆ ಮುದ್ದೇಬಿಹಾಳ ಪಿಎಸೈ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.