ಮುದ್ದೇಬಿಹಾಳ: ಸರ್ಕಾರಿ ಪ್ರಾಥಮಿಕ ಶಾಲೆಯ ಛಾವಣಿ ಕುಸಿದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಎರಡನೇ ತರಗತಿಯಲ್ಲಿ ಓದುತ್ತಿರುವ ಸಚಿನ್ ಬಸವರಾಜ ಕೋಳೂರ ಹಾಗೂ ಒಂದನೇ ತರಗತಿ ಓದುತ್ತಿರುವ ಸಮರ್ಥ ಲಕ್ಷ್ಮಣ ಕೋಲಕಾರ ಗಾಯಗೊಂಡಿರುವ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳ ತಲೆ ಮೇಲೆ ಮೇಲ್ಛಾವಣಿಯ ಸಿಮೆಂಟ್ ಅವಶೇಷ ಬಿದ್ದಿದ್ದು, ಕೂಡಲೇ ಶಾಲೆಯ ಮುಖ್ಯಗುರು ಎಸ್.ಎಂ.ಜೋಗಿನ್ ಅವರು ಪಾಲಕರಿಗೆ ವಿಷಯ ತಿಳಿಸಿ ಮಕ್ಕಳನ್ನು ಮುದ್ದೇಬಿಹಾಳದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ:ಪುತ್ತೂರು: ಕುಖ್ಯಾತ ಅಂತರರಾಜ್ಯ ಕಳ್ಳರಿಬ್ಬರು ಪೋಲೀಸರ ಬಲೆಗೆ
ಆಸ್ಪತ್ರೆಗೆ ಬಿಇಓ ಎಚ್.ಜಿ.ಮಿರ್ಜಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ.
ಪಾಲಕರ ಆಕ್ರೋಶ
ಹಳೆಯದಾದ ಶಾಲೆಯ ಮೇಲ್ಛಾವಣಿಯಿರುವ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸಬಾರದು ಎಂಬುದನ್ನು ಲೆಕ್ಕಿಸದೇ, ಶಿಕ್ಷಕರು ಮಕ್ಕಳನ್ನು ಕೂರಿಸಿ ಪಾಠ ಮಾಡಲು ಮುಂದಾಗಿರುವುದಕ್ಕೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳಿಗೆ ಏನಾದರೂ ಹೆಚ್ಚು ಕಮ್ಮಿ ಆಗಿದ್ದರೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.