ಬೆಂಗಳೂರು: ಮನೆ ಮುಂದೆ ನಿಂತಿದ್ದ ಬಾಲಕನಿಗೆ ರಾಟ್ ವಿಲರ್ ಜಾತಿಯ ನಾಯಿ ಕಚ್ಚಿ ಗಂಭೀರ ಗಾಯಗೊಳಿಸಿದ್ದು, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಾಯಿ ಮಾಲಿಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಂದಿರಾನಗರದ ಕದಿರೈಯ್ಯನಪಾಳ್ಯದ ರಿಶಾನ್ (4) ಗಾಯಗೊಂಡ ಬಾಲಕ.
ಕೇರಳ ಮೂಲದ ರಿಶಾದ್ ಹಾಗೂ ರಸಿಕಾ ದಂಪತಿ ಪುತ್ರ ರಿಶಾನ್ ಜೊತೆಗೆ ಕದಿರೈಯ್ಯನಪಾಳ್ಯದಲ್ಲಿ ನೆಲೆಸಿದ್ದಾರೆ. ಇವರ ಮನೆ ಪಕ್ಕದಲ್ಲಿ ನೆಲೆಸಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ಎಂಬುವವರು ರಾಟ್‌ವೀಲರ್ ನಾಯಿ ಸಾಕಿದ್ದರು. ನಾಯಿಯನ್ನು ಮನೆಯಲ್ಲಿ ಕಟ್ಟಿಹಾಕುವಂತೆ ರಿಶಾದ್ ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದರೂ ಮಾಲಿಕರು ನಿರ್ಲಕ್ಷಿಸಿದ್ದರು.
ಕಳೆದ ಜ.5ರಂದು ಮನೆ ಬಳಿ ರಿಶಾನ್ ಆಟವಾಡುತ್ತಿದ್ದಾಗ ಆತನ ಮೇಲೆ ದಾಳಿ ಮಾಡಿದ ನಾಯಿ ಮೆಟ್ಟಿಲುಗಳ ಮೇಲೆ ಎಳೆದೊಯ್ದ ಕಚ್ಚಿದೆ. ಮಗನ ಚೀರಾಟ ಕೇಳಿ ಪಾಲಕರು ಓಡಿ ಬಂದು ನಾಯಿಯ ದಾಳಿಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ರಿಶಾದ್ ಗೂ ಕಚ್ಚಿದ ಗಾಯಗಳಾಗಿವೆ. ತಂದೆ-ಮಗ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗೇಶ್ವರಿ ಹಾಗೂ ಸಂಜಯ್ ವಿರುದ್ಧ ರಿಶಾನ್ ಬಾಲಕನ ತಾಯಿ ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ.